ನವದೆಹಲಿ (ಪಿಟಿಐ): ಜನಲೋಕಪಾಲ ಮಸೂದೆ ಪರ ಹೋರಾಟವನ್ನು ತೀವ್ರಗೊಳಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇತರ ಪಕ್ಷಗಳ ಬೆಂಬಲವಿಲ್ಲದೆ ರಾಜ್ಯ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
‘ವಿವಾದಾತ್ಮಕ ಮಸೂದೆಗೆ ಅಂಗೀಕಾರ ದೊರೆಯದಿದ್ದರೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಹಕ್ಕಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಲು ನೂರು ಬಾರಿ ಬೇಕಿದ್ದರೂ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸುತ್ತೇನೆ. ಜನ ಲೋಕಪಾಲ ಮತ್ತು ಸ್ವರಾಜ್ಯ ಮಸೂದೆ ಅಂಗೀಕಾರವಾಗದಿದ್ದರೆ ಸರ್ಕಾರ ಉರುಳಲಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಚುನಾವಣೆಯ ಸಂದರ್ಭದಲ್ಲಿ ನೀಡಿದ ಪ್ರಮುಖ ಭರವಸೆಗಳಲ್ಲಿ ಜನ ಲೋಕಪಾಲ ಮಸೂದೆ ಅಂಗೀಕಾರ ಕೂಡ ಒಂದು. ಮಸೂದೆಯನ್ನು ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ವಿರೋಧಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.