ADVERTISEMENT

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಸಲ್ಮಾನ್ ಖುರ್ಷಿದ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 9:50 IST
Last Updated 14 ಅಕ್ಟೋಬರ್ 2012, 9:50 IST

ನವದೆಹಲಿ (ಐಎಎನ್ಎಸ್): ತಮ್ಮ ಪತ್ನಿ ಲೂಸಿ ಖುರ್ಷಿದ್ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಯಲ್ಲಿ ಹಣಕಾಸು ಅಕ್ರಮಗಳು ನಡೆಯುತ್ತಿದೆ ಎಂಬ ಆರೋಪಗಳನ್ನು ಭಾನುವಾರ ಇಲ್ಲಿ ಖಂಡತುಂಡವಾಗಿ ನಿರಾಕರಿಸಿದ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಆರೋಪಗಳು ಸತ್ಯವೆಂದು ಋಜುವಾತಾದಲ್ಲಿ ತಾವು ರಾಜಕೀಯವನ್ನೇ ತ್ಯಜಿಸುವುದಾಗಿ ಹೇಳಿದರು.

~ಈ ಉದ್ದೇಶಕ್ಕಾಗಿ ಕಾನೂನು ಸಚಿವರು ಸಹಿಗಳನ್ನು ನಕಲಿ ಮಾಡಿದ್ದಾರೆಂದು ನೀವು ಯೋಚಿಸುತ್ತಿದ್ದೀರಾ? ಈ ಸಹಿಗಳು ನಕಲಿ ಎಂಬುದಾಗಿ ಸಾಬೀತಾದರೆ ನಾನು ರಾಜಕೀಯವನ್ನೇ ಬಿಟ್ಟು ಬಿಡುವೆ ಎಂದು ಸಲ್ಮಾನ್ ಖುರ್ಷಿದ್ ಅವರು ಸಿಎನ್ಎನ್- ಐಬಿಎನ್ ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ನುಡಿದರು.

ಭ್ರಷ್ಟಾಚಾರ ವಿರುದ್ಧ ಭಾರತ (ಐಎಸಿ) ನಾಯಕ ಅರವಿಂದ ಕೇಜ್ರಿವಾಲ್ ಅವರು ಖುರ್ಷಿದ್ ದಂಪತಿ ನಡೆಸುತ್ತಿರುವ ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ನಲ್ಲಿ ಹಣಕಾಸು ಅಕ್ರಮಗಳು ನಡೆದಿವೆ ಎಂಬುದಾಗಿ ಮಾಡಿದ ಆರೋಪಗಳಿಗೆ ಸಲ್ಮಾನ್ ಪ್ರತಿಕ್ರಿಯಿಸುತ್ತಿದ್ದರು.

~ಈ ಸಹಿಗಳು ನಕಲಿ ಎಂಬುದಾಗಿ ಸಾಬೀತಾದರೆ ನೀವು (ಮಾಧ್ಯಮ ಮಂದಿ) ಪತ್ರಿಕೋದ್ಯಮ ಬಿಟ್ಟು ಬಿಡುತ್ತೀರಾ? ಈ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕಾದ ಕಾಲ ಬಂದಿದೆ~ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.

ಖುರ್ಷಿದ್ ಅವರು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಯಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ಹಿನ್ನೆಲೆಯಲ್ಲಿ ಸಲ್ಮಾನ್ ಖುರ್ಷಿದ್ ಅವರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ಚಳವಳಿ ನಡೆಸುವುದಾಗಿ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ನಾಯಕ ಕೇಜ್ರಿವಾಲ್ ಶನಿವಾರ ಪ್ರಕಟಿಸಿದ್ದರು.

ಅಂಗವಿಕರಲರಿಗೆ ಮೀಸಲಾದ 7.1 ಲಕ್ಷ ರೂಪಾಯಿಗಳನ್ನು ತಮ್ಮ ನೇತೃತ್ವದ ಸರ್ಕಾರೇತರ ಸಂಸ್ಥೆ ಗುಳುಂಕರಿಸಿದೆ ಎಂಬ ಆರೋಪ ಮಾಡಿದ್ದಕ್ಕಾಗಿ ಕೇಜ್ರಿವಾಲ್ ಮತ್ತು ಟಿವಿ ವಾಹಿನಿಯೊಂದನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಸಿ ಖುರ್ಷಿದ್ ಅವರು ಆರೋಪಗಳು ಸುಳ್ಳು ಎಂದು ಹೇಳಿ ತಳ್ಳಿ ಹಾಕಿದ್ದರು.

ತಮಗೆ 100 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಟಿವಿ ವಾಹಿನಿ ವಿರುದ್ಧ ಲೂಸಿ ಶುಕ್ರವಾರ ದೆಹಲಿ ನ್ಯಾಯಾಲಯವೊಂದರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ನ್ಯಾಯಾಲಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.