ನವದೆಹಲಿ (ಪಿಟಿಐ): ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಗೃಹ ಸಚಿವಾಲಯದ ಕ್ರಮ ಇವೇ ಮೊದಲಾದ ವಿಚಾರಗಳು ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆಗಳಿವೆ.
ರಸಗೊಬ್ಬರ ಸಬ್ಸಿಡಿ ಕಡಿತ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಬಗ್ಗೆ ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ವಿರೋಧ ವ್ಯಕ್ತಪಡಿಸಿರುವುದರಿಂದ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಜತೆ ಮಿತ್ರ ಪಕ್ಷಗಳಿಂದಲೂ ಟೀಕಾಸ್ತ್ರ ಎದುರಿಸಬೇಕಾಗಿದೆ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಘಟಕಗಳನ್ನು ಸ್ಥಾಪಿಸಲು ಮುಂದಾದ ಕೇಂದ್ರದ ಕ್ರಮದ ಬಗ್ಗೆ ಕಾಂಗ್ರೆಸ್‌ಯೇತರ ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದು, ತೃಣಮೂಲ ಕಾಂಗ್ರೆಸ್ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾಗಿದೆ ಎಂಬ ವಿಚಾರವೇ ಬಜೆಟ್ ಅಧಿವೇಶನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ.
ಮೂರು ತಿಂಗಳುಗಳ ಕಾಲ ನಡೆಯಲಿರುವ ಈ ಅಧಿವೇಶನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಾಂಪ್ರದಾಯಿಕವಾಗಿ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಆರಂಭವಾಗಲಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸವಾಲಾಗಿ ಪರಿಣಮಿಸಲಿದೆ.
ಪ್ರತಿಭಾ ಪಾಟೀಲ್ ಅವರು ಜುಲೈಯಲ್ಲಿ ನಿವೃತ್ತಿ ಹೊಂದಲಿರುವುದರಿಂದ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾಡುವ ಕೊನೆಯ ಭಾಷಣ ಇದಾಗಲಿದೆ.
ಅಧಿವೇಶನ ಆರಂಭವಾಗಿ ನಾಲ್ಕು ದಿನಗಳ ನಂತರ ಅಂದರೆ ಮಾರ್ಚ್ 16ರಂದು 2012-13ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, 14ರಂದು ರೈಲ್ವೆ ಬಜೆಟ್ ಮಂಡನೆಯಾಗಲಿದೆ. 15ರಂದು ಆರ್ಥಿಕ ಸಮೀಕ್ಷಾ ವರದಿಯನ್ನು ಸದನದ ಮುಂದಿಡಲಾಗುತ್ತದೆ.
ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂಬ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ಹೇಳಿಕೆಯು ಸಹ ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.
ಅಧಿವೇಶನ ಕಾವೇರುವ ಸಾಧ್ಯತೆಗಳಿರುವುದನ್ನು ನಿರೀಕ್ಷಿಸಿರುವ ಕಾಂಗ್ರೆಸ್, ಮಿತ್ರ ಪಕ್ಷಗಳನ್ನು ಓಲೈಸುವ ಉದ್ದೇಶದಿಂದ ಯುಪಿಎ ಸಮನ್ವಯ ಸಮಿತಿ ರಚಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು `ಮಿತ್ರ ಪಕ್ಷಗಳ ಜತೆ ನಿಯಮಿತವಾಗಿ ಸಂವಾದ ನಡೆಸಲಾಗುವುದು ಮತ್ತು ವಿರೋಧ ಪಕ್ಷಗಳು ಜನಹಿತ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕು~ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹತ್ತಿ ರಫ್ತು ನಿಷೇಧಿಸುವ ಮೂಲಕ ರೈತ ವಿರೋಧಿ ನಿಲುವು ತಳೆಯಲಾಗಿದೆ ಎಂಬ ವಿರೋಧ ಪಕ್ಷಗಳ ಅಭಿಪ್ರಾಯವು ಅಧಿವೇಶನದಲ್ಲಿ ಭಾರಿ ಚರ್ಚೆಯಾಗುವ ನಿರೀಕ್ಷೆ ಇದೆ.
ಇಸ್ರೊ-ದೇವಾಸ್ ವಿವಾದ, ಮಾಧವನ್ ನಾಯರ್ ವಿರುದ್ಧ ಕ್ರಮ, ಕೂಡುಂಕುಳಂ ಚಳವಳಿ ಇವೇ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಸರ್ಕಾರವನ್ನು ಹಣಿಯಲು ತುದಿಗಾಲ ಮೇಲೆ ನಿಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.