ADVERTISEMENT

ಇಕ್ಲಾಖ್ ಹತ್ಯೆ: ಪ್ರಮುಖ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ದಾದ್ರಿ (ಉತ್ತರ ಪ್ರದೇಶ) (ಪಿಟಿಐ): ಗೋಮಾಂಸ ಸೇವಿಸಿದ್ದಾರೆ ಎಂದು ಅನುಮಾನಪಟ್ಟು ಇಕ್ಲಾಖ್ ಎಂಬುವರನ್ನು ಉದ್ರಿಕ್ತರ ಗುಂಪು ಸೋಮವಾರ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಇಬ್ಬರು ಹದಿವಯಸ್ಕರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ.

ಬಿಶಾದ್ ಗ್ರಾಮಕ್ಕೆ ಸಮೀಪದ ಸ್ಥಳವೊಂದರಲ್ಲಿ ಅಡಗಿಕೊಂಡಿದ್ದ 18 ವರ್ಷ ವಯಸ್ಸಿನ ಈ ಇಬ್ಬರು, ಪ್ರಕರಣದ ಪ್ರಮುಖ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಈ ಮೊದಲು ಘೋಷಿಸಿದ್ದ ₹ 10 ಲಕ್ಷ ಪರಿಹಾರದ ಮೊತ್ತವನ್ನು, ₹ 20 ಲಕ್ಷಕ್ಕೆ ಏರಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆದೇಶಿಸಿದ್ದಾರೆ.

ಯಾರೂ ಬರುವುದು ಬೇಡ: ‘ತಂದೆಯನ್ನು ಕಳೆದುಕೊಂಡು ಈಗಾಗಲೆ ದುಃಖದಲ್ಲಿದ್ದೇವೆ. ಎಲ್ಲರೂ ನಮ್ಮನ್ನು ಭೇಟಿ ಮಾಡಲು ಬರುತ್ತಿರುವುದು ನಮಗೆ ಮುಜುಗರ ಉಂಟು ಮಾಡುತ್ತಿದೆ. ಮನೆಗೆ ಯಾರೂ ಬರದಂತೆ ತಡೆಯಿರಿ’ ಎಂದು ಮೃತ ಇಕ್ಲಾಖ್ ಅವರ ಮಗ ಸರ್ತಾಜ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೇ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗ್ರಾಮಕ್ಕೆ ಪ್ರವೇಶಿಸದಂತೆ ಪೊಲೀಸರು ಮತ್ತು ಗ್ರಾಮಸ್ಥರು ತಡೆದಿದ್ದಾರೆ. ಭಾರಿ ಚರ್ಚೆಯ ನಂತರ ಗ್ರಾಮ ಪ್ರವೇಶಿಸಲು ಅವರಿಬ್ಬರಿಗೆ ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಹಿಂದೂ ಮುಸ್ಲಿಮರ ಮಧ್ಯೆ ವಿಷಬೀಜ: ಇಕ್ಲಾಖ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದ ಅರವಿಂದ ಕೇಜ್ರಿವಾಲ್, ರಾಜಕೀಯ ಪಕ್ಷಗಳನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ‘ಈ ಘಟನೆಯನ್ನು ರಾಜಕೀಯ ಪಕ್ಷಗಳು ತಮ್ಮ ಮತ ಬ್ಯಾಕ್ ಬೆಳೆಸಲು ಬಳಸಿಕೊಳ್ಳುತ್ತಿವೆ. ಒಂದು ಪಕ್ಷ ಹಿಂದೂಗಳನ್ನು ಓಲೈಸುತ್ತಿದ್ದರೆ, ಮತ್ತೊಂದು ಮುಸ್ಲಿಮರನ್ನು ಓಲೈಸುತ್ತಿದೆ. ಒಟ್ಟಿನಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ದ್ವೇಷದ ವಿಷಬೀಜ ಬಿತ್ತುತ್ತಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.