ADVERTISEMENT

ಇನ್ನೂ ಕೆಲ ದಾಖಲೆಗಳ ನಿರೀಕ್ಷೆಯಲ್ಲಿ ಸಿಬಿಐ

ಕಡತ ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಅಗತ್ಯವಾದ ಇನ್ನೂ ಕೆಲವು ದಾಖಲೆಗಳನ್ನು ಕಲ್ಲಿದ್ದಲು ಸಚಿವಾಲಯ ನೀಡಬೇಕಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ನಾಪತ್ತೆಯಾಗಿದ್ದವು ಎಂದು ಹೇಳಲಾಗಿದ್ದ ಕಡತಗಳಲ್ಲಿಯ ಮಾಹಿತಿಗಳನ್ನು ಒಳಗೊಂಡ ದಾಖಲೆಗಳ ಅನೇಕ ಕಡತಗಳನ್ನು ಕಲ್ಲಿದ್ದಲು ಸಚಿವಾಲಯ ಇತ್ತೀಚೆಗೆ ಸಿಬಿಐಗೆ ಹಸ್ತಾಂತರಿಸಿದೆ. ಈ ದಾಖಲೆಗಳನ್ನು ಪರಿಶೀಲಿಸಿದ ಸಿಬಿಐ ಅಧಿಕಾರಿಗಳು ಇನ್ನೂ ಕೆಲವು ದಾಖಲೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಕಾಣೆಯಾಗಿರುವ ಕಡತಗಳ ಪಟ್ಟಿಯನ್ನು ಕಲ್ಲಿದ್ದಲು ಸಚಿವಾಲಯ ಇದುವರೆಗೆ ನೀಡಿಲ್ಲ. ಆದ್ದರಿಂದ ಸಿಬಿಐ ಸ್ವತಃ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತನಿಖೆಗೆ ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಸಿಬಿಐ ಅಟಾರ್ನಿ ಜನರಲ್‌ ಮೂಲಕ ಕಲ್ಲಿದ್ದಲು ಸಚಿವಾಲಯಕ್ಕೆ ಸಲ್ಲಿಸಿತ್ತು. ಆದರೆ ಪಟ್ಟಿಯಲ್ಲಿ ಸೂಚಿಸಲಾಗಿದ್ದ ಎಲ್ಲಾ ದಾಖಲೆಗಳು ತಲುಪಿಲ್ಲ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.