ADVERTISEMENT

ಇನ್ನೂ 48 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯವೇತನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಕಾಲೇಜು ಹಂತದಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಶಿಷ್ಯವೇತನ ಯೋಜನೆ ವ್ಯಾಪ್ತಿಗೆ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಇನ್ನೂ 48 ಲಕ್ಷ ಮಕ್ಕಳನ್ನು ಸೇರಿಸಲು ಸರ್ಕಾರ ಮುಂದಾಗಿದೆ.

ಅಲ್ಲದೆ ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೊತ್ತ ನಿಗದಿಗೆ ನಿರ್ಧರಿಸಿದೆ.
ಕಾಲೇಜು ಹಂತದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರೈಸಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಆರಂಭಿಸಿ, ಇದಕ್ಕಾಗಿ 2200 ಕೋಟಿ ರೂಪಾಯಿ ಮಂಜೂರು ಮಾಡಿತ್ತು. 

`ಕೆಲವು ರಾಜ್ಯಗಳು ಈ ಯೋಜನೆಯ ಬಗ್ಗೆ ಅಪಾರ ಆಸಕ್ತಿ ತೋರಿಸಿದ್ದು, ಈಗಾಗಲೇ ನಾವು 2303 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಹೆಚ್ಚಿನ ಹಣ ಹಂಚಲಾಗುತ್ತದೆ~ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಮುಕುಲ್ ವಾಸ್ನಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
 
ಶೇ 15ರಷ್ಟು ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಶೇ 37ರಷ್ಟು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 643 ಕೋಟಿ ರೂಪಾಯಿ ಗರಿಷ್ಠ ಅನುದಾನದೊಂದಿಗೆ ಆಂಧ್ರ ಪ್ರದೇಶವು ಈ ಯೋಜನೆಯನ್ನು ಜಾರಿಗೊಳಿಸಿದ ಮುಂಚೂಣಿ ರಾಜ್ಯ ಎನಿಸಿಕೊಂಡಿದೆ. ಉತ್ತರ ಪ್ರದೇಶ (505 ಕೋಟಿ ರೂಪಾಯಿ) ಹಾಗೂ ಮಹಾರಾಷ್ಟ್ರ (ರೂ 316 ಕೋಟಿ ) ಕೂಡ ಯೋಜನೆಯ ಪ್ರಯೋಜನ ಪಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.