ADVERTISEMENT

ಈಶಾನ್ಯ ರಾಜ್ಯಗಳ ವಲಸಿಗರ ಬವಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST
ಈಶಾನ್ಯ ರಾಜ್ಯಗಳ ವಲಸಿಗರ ಬವಣೆ
ಈಶಾನ್ಯ ರಾಜ್ಯಗಳ ವಲಸಿಗರ ಬವಣೆ   

ಹತ್ಯೆ, ಹಲ್ಲೆ ನಡೆಯುವ `ಗಾಳಿ ಸುದ್ದಿ~ಗಳಿಂದ ಭಯಭೀತರಾದ ಈಶಾನ್ಯ ರಾಜ್ಯದ ವಲಸಿಗರು ಬೆಂಗಳೂರು, ಪುಣೆ, ಹೈದರಾಬಾದ್, ಚೆನ್ನೈ ಮತ್ತು ಮುಂಬೈನಿಂದ ಸಾವಿರಾರು ಸಂಖ್ಯೆಯಲ್ಲಿ ತಮ್ಮ ತವರಿಗೆ ಮರಳಿದ್ದಾರೆ. ಕೆಲವರು ಉದ್ದೇಶಪೂರ್ವಕ, ವ್ಯವಸ್ಥಿತ ವದಂತಿ ಹಬ್ಬಿಸಿದ್ದೇ ಇದಕ್ಕೆ ಕಾರಣ. ನೆರೆಯ ಪಾಕಿಸ್ತಾನವೂ ಇದರಲ್ಲಿ ಕೈಜೋಡಿಸಿರುವುದನ್ನು ಕೇಂದ್ರ ಸರ್ಕಾರವೇ ಖಚಿತಪಡಿಸಿದೆ.

ತವರಿಗೆ ಮರಳಿರುವ ಜನರಲ್ಲಿ ಮುಂದೇನು ಎನ್ನುವ ಅನಿಶ್ಚಿತತೆ ಮನೆ ಮಾಡಿದೆ. ದಕ್ಷಿಣದ ರಾಜ್ಯಗಳಿಗೆ ಮರಳುವುದೇ ಅಥವಾ ಸ್ಥಳೀಯವಾಗಿಯೇ ಉಪಜೀವನ ಸಾಗಿಸುವುದೇ ಎನ್ನುವ ಗೊಂದಲದಲ್ಲಿ ಮುಳುಗಿದ್ದಾರೆ. ಅವರಿಲ್ಲದೇ ಸ್ಥಳೀಯ ಹೋಟೆಲ್, ಭದ್ರತಾ ಸಿಬ್ಬಂದಿ, ಬ್ಯೂಟಿಪಾರ್ಲರ್ ಉದ್ಯಮದಲ್ಲೂ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ.

ಭಾರತದ ವಿರುದ್ಧ `ಸೈಬರ್ ಯುದ್ಧ~ದಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್  ಆರೋಪಿಸಿದ್ದಾರೆ. ನಿರೀಕ್ಷೆಯಂತೆ ಪಾಕಿಸ್ತಾನ ಈ ಟೀಕೆ ನಿರಾಕರಿಸಿದೆ.

ಬೆದರಿಕೆ ಸಂದೇಶ

ಮೊಬೈಲ್‌ಗಳಿಗೆ ಬಂದ ಅನಾಮಧೇಯ ಸಂದೇಶಗಳಲ್ಲಿ `ಅಸ್ಸಾಂನಲ್ಲಿ ನಡೆದ ಕೋಮು ಗಲಭೆಯ ಪ್ರತೀಕಾರ ತೆಗೆದುಕೊಳ್ಳಲಾಗುವುದು. `ನಿಮ್ಮ ಮೇಲೆ ದಾಳಿ ನಡೆಯಲಿದೆ. ನಿಮ್ಮ ತವರು ರಾಜ್ಯಗಳಿಗೆ ತೆರಳಿ, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಾಗದು~  ಎಂಬರ್ಥದ ಭಯ ಬಿತ್ತುವ ದ್ವೇಷದ ಸಂದೇಶಗಳು, ಬಹುಮಾಧ್ಯಮ ಚಿತ್ರಗಳು (ಎಸ್‌ಎಂಎಸ್ / ಎಂಎಂಎಸ್) ವಲಸಿಗರಲ್ಲಿ ಒಬ್ಬರಿಂದ ಒಬ್ಬರಿಗೆ ಭಾರಿ ಸಂಖ್ಯೆಯಲ್ಲಿ ಹರಿದಾಡಿದ್ದೇ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ.

ನಿರ್ದಿಷ್ಟವಾಗಿ ಈಶಾನ್ಯ ಜನರನ್ನು ಗುರಿಯಾಗಿರಿಸಿಕೊಂಡೇ ಈ ಬೆದರಿಕೆ ಸಂದೇಶಗಳು ಹರಡಿದ್ದವು. ಬಹುತೇಕ ಜನರು ಇವುಗಳ ಮೂಲ ಹುಡುಕುವ ಗೋಜಿಗೆ ಹೋಗದೆ, ತವರಿಗೆ ಮರಳುವ ಸಮೂಹ ಸನ್ನಿಗೆ ಒಳಗಾದರು.

ಗಾಳಿ ಸುದ್ದಿ
ಬೆದರಿಕೆ, ಗಾಳಿ ಸುದ್ದಿಗಳು ಇತಿಹಾಸದ ಉದ್ದಕ್ಕೂ ಕಂಡು ಬರುತ್ತವೆ. ಅನೇಕ ಹಿಂಸಾಚಾರ, ಗಲಭೆ ಮತ್ತಿತರ ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಲು ಗಾಳಿ ಸುದ್ದಿಗಳೇ ಪ್ರಮುಖ ಪಾತ್ರ ನಿರ್ವಹಿಸಿವೆ.
ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಖಚಿತಪಡಿಸಿಕೊಳ್ಳದ ವಿದ್ಯಮಾನಗಳೇ ಗಾಳಿಸುದ್ದಿ. ಇವುಗಳಿಗೆ ಯಾವುದೇ ಆಧಾರ ಇರಲಾರವು.  ತಕ್ಷಣಕ್ಕೆ ಸುದ್ದಿಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವೂ ಆಗಲಾರದು.

ಕೆಲವರಿಗೆ ಅಂತಹ ವ್ಯವಧಾನವೂ ಇರದೇ ಇನ್ನೊಬ್ಬರಿಗೆ ಧಾವಂತದಿಂದಲೇ ಸುದ್ದಿ ದಾಟಿಸಿ ಕೈತೊಳೆದುಕೊಂಡು ಬಿಡುತ್ತಾರೆ. ದುಷ್ಕರ್ಮಿಗಳು ತಮ್ಮ ದುರುದ್ದೇಶ ಸಾಧಿಸಿಕೊಳ್ಳಲು ಮಾಡಿದ ಸುಳ್ಳಿನ ಕಂತೆಗಳ  ಅಪಪ್ರಚಾರವೇ ಗಾಳಿ ಸುದ್ದಿ ಆಗಿರುತ್ತದೆ.

ಈ ಹಿಂದೆ, ಗಾಳಿ ಸುದ್ದಿ ಹಬ್ಬಿಸುವವರನ್ನು, ರೌಡಿಗಳ ಪಟ್ಟಿಯಲ್ಲಿ ಇರುವವರನ್ನು ಬಂಧಿಸಿ ವದಂತಿ ಹರಡುವಿಕೆ ನಿಯಂತ್ರಿಸಲಾಗುತ್ತಿತ್ತು. ಬದಲಾದ ಕಾಲಕ್ಕೆ ತಕ್ಕಂತೆ ಗುಂಪು ಎಸ್‌ಎಂಎಸ್ / ಎಂಎಂಎಸ್ ಮತ್ತು ಕೆಲ ಅಂತರಜಾಲ ತಾಣಗಳ ಮೇಲೆ ಕಡಿವಾಣ ವಿಧಿಸುವ ಮೂಲಕ ವದಂತಿಗಳನ್ನು ನಿಯಂತ್ರಿಸಲಾಗುತ್ತಿದೆ.

ಸದ್ಯದ ಮಾಹಿತಿ ಯುಗದಲ್ಲಿ ಇದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಮ್ಮ ಸೈಬರ್ ಪೊಲೀಸ್ ವ್ಯವಸ್ಥೆ ವಿಫಲವಾಗಿದೆಯೇ ಎನ್ನುವ ಅನುಮಾನಗಳು ಮೂಡುತ್ತವೆ.

ಎಸ್‌ಎಂಎಸ್ ಕಡಿವಾಣ
ಗಾಳಿ ಸುದ್ದಿಗಳಿಗೆ ಕಡಿವಾಣ ಹಾಕಲು ಶನಿವಾರದಿಂದಲೇ (ಆ 17ರಿಂದ) ಗುಂಪು ಎಸ್‌ಎಂಎಸ್ ಮತ್ತು ಎಂಎಂಎಸ್‌ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಈ ನಿರ್ಬಂಧ 15 ದಿನಗಳ ಕಾಲ ಜಾರಿಯಲ್ಲಿ ಇರಲಿದೆ. ದಿನಕ್ಕೆ ಗರಿಷ್ಠ 5 ಎಸ್‌ಎಂಎಸ್‌ಗಳನ್ನು ಮಾತ್ರ ಕಳಿಸಲು ಮತ್ತು ಮೊಬೈಲ್‌ಗಳಿಂದ 20 ಕಿಲೊಬೈಟ್ಸ್‌ಗಿಂತ (ಕೆಬಿ) ಹೆಚ್ಚಿನ ದತ್ತಾಂಶ ರವಾನೆಯನ್ನೂ ನಿರ್ಬಂಧಿಸಲಾಗಿದೆ. ಸೆಪ್ಟೆಂಬರ್ 9ರವರೆಗೆ ಈ ನಿಷೇಧ ಜಾರಿಯಲ್ಲಿ ಇರಲಿದೆ.

ತಿರುಚಿದ ಮಾಹಿತಿ
ಮ್ಯಾನ್ಮಾರ್ ಮತ್ತು ಅಸ್ಸಾಂನಲ್ಲಿ ಹಿಂದೆ ನಡೆದ ಘಟನೆಗಳನ್ನು ತಿರುಚಿ ಹೊಸದಾಗಿ ಹಲ್ಲೆ, ಕೊಲೆ, ಸುಲಿಗೆ ನಡೆದಿದೆ ಎಂಬಂತೆ ಬಿಂಬಿಸಿ `ಫೇಸ್‌ಬುಕ್~, ಟ್ವಿಟರ್, ಯೂಟೂಬ್ ಮತ್ತಿತರ  ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಮಾಹಿತಿ ಮತ್ತು ಚಿತ್ರಗಳನ್ನು ಹರಿ ಬಿಟ್ಟಿದ್ದು ಈ ಬಿಕ್ಕಟ್ಟಿನ ಮೂಲ.
 
ಈಶಾನ್ಯ ರಾಜ್ಯದವರ ವಿರುದ್ಧ ನಡೆದ ಸಣ್ಣ - ಪುಟ್ಟ ಹಲ್ಲೆ, ತಕ್ಷಣಕ್ಕೆ ದಾಖಲೆಯಾಗದ ದೂರುಗಳು, ಮುಂಬೈನಲ್ಲಿ ನಡೆದ ಗಲಭೆಗಳ ಹಿಂದೆಯೇ ಮೊಬೈಲ್‌ನಲ್ಲಿ ಬಂದ ಬೆದರಿಕೆ ಸಂದೇಶಗಳು ವಲಸಿಗರಲ್ಲಿ ಇನ್ನಿಲ್ಲದ ಆತಂಕ ಮೂಡಿಸಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.