ADVERTISEMENT

ಉತ್ತರಾಖಂಡದಲ್ಲಿ ಬಂಡಾಯ ತಡೆಗೆ ಬಿಜೆಪಿ, ಕಾಂಗ್ರೆಸ್ ವಿಫಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಬಂಡಾಯವನ್ನು ತಡೆಯಲು ವಿಫಲವಾಗಿರುವ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಈ ತಿಂಗಳ 30ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಸಜ್ಜಾಗಿ, ಬಂಡಾಯ ಸಚಿವರು, ನಾಯಕರನ್ನು ಉಚ್ಚಾಟಿಸುವ ಪ್ರಕ್ರಿಯೆ ಆರಂಭಿಸುವ ಮೂಲಕ ಅವರಿಗೆ ಯಾವುದೇ ಲಾಭವಾಗದಂತೆ ಮುನ್ನೆಚ್ಚರಿಕೆ ವಹಿಸಿವೆ.

ಒಟ್ಟು 70 ಕ್ಷೇತ್ರಗಳ ಪೈಕಿ 20ರಿಂದ 22ರಲ್ಲಿ ಎರಡೂ ಪಕ್ಷಗಳು ಟಿಕೆಟ್ ಹಂಚಿಕೆಯ ನಂತರ ಬಂಡಾಯವನ್ನು ಎದುರಿಸುತ್ತಿವೆ.

ಬಿಜೆಪಿ ಈವರೆಗೆ ಹಾಲಿ ಶಾಸಕರಾದ ಕೇದಾರ್ ಸಿಂಗ್ ಫಾನಿಯ, ರಾಜ್‌ಕುಮಾರ್, ಜಿ.ಎಲ್. ಷಾ ಹಾಗೂ ಅನಿಲ್ ನಾಟಿಯಾಲ್ ಸೇರಿ ಸುಮಾರು 22 ಮಂದಿ ಬಂಡಾಯ ನಾಯಕರನ್ನು ಉಚ್ಚಾಟಿಸಿದೆ.

ಈ ಪಕ್ಷವು ಸುಮಾರು 36 ಹೊಸ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕಿಳಿಸಿದೆ. ವಿರೋಧಿ ಅಲೆ ತಡೆಯುವ ನಿಟ್ಟಿನಲ್ಲಿ 36 ಹಾಲಿ ಶಾಸಕರ ಪೈಕಿ 12 ಮಂದಿಯನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮೊದಲಿಗೆ ಬಂಡಾಯ ಎ್ದ್ದದವರಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರಾದ ಖಾಜನ್ ದಾಸ್ ಮತ್ತು ಗೋವಿಂದ್ ಸಿಂಗ್ ಬಿಶ್ತ್ ಈಗ ಮತ್ತೆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಮೂರು ಗುಂಪು: ಕಾಂಗ್ರೆಸ್ ಬಂಡಾಯವನ್ನು ತಡೆಯಲು ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದರೂ ಸಹ ಬಂಡಾಯವನ್ನು ಎದುರಿಸುತ್ತಿದೆ. ಪಕ್ಷವು ಮೂರು ಗುಂಪುಗಳಾಗಿ ವಿಭಜನೆಗೊಂಡಿದೆ.

ನಾಯಕರಾದ ಹರೀಶ್ ರಾವತ್, ವಿಜಯ್ ಬಹುಗುಣ, ಸತ್ಪಾಲ್ ಮಹಾರಾಜ್ ಅವರ ಅನೇಕ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿದ ಪರಿಣಾಮ, ಅವರು ಬೇರೆ ಬೇರೆ ಗುಂಪುಗಳಲ್ಲಿ ಗುರುತಿಸಿಕೊಂಡು ಪಕ್ಷಕ್ಕೆ ಹಾನಿಯುಂಟು ಮಾಡಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷದ ರಾಜ್ಯ ಘಟಕದ ನಾಯಕರ ದುರ್ಬಲ ನಿರ್ವಹಣೆಯಿಂದಾಗಿ ಬಂಡಾಯ ಹೆಚ್ಚಲು ಕಾರಣವಾಗಿದೆ.  ಪಕ್ಷವು ನೈಥಾನಿ ಮತ್ತು ಬಿಶ್ತ್ ಸೇರಿದಂತೆ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರಾಕರಿಸಿದ ಸುಮಾರು ಐವರು ನಾಯಕರನ್ನು ಪಕ್ಷದಿಂದ ವಜಾಗೊಳಿಸಿದೆ.

ಈ ನಡುವೆ, ಕಳೆದ ವರ್ಷ ಬಿಜೆಪಿ ತ್ಯಜಿಸಿದ ಮಾಜಿ ಪ್ರವಾಸೋದ್ಯಮ ಸಚಿವ ಟಿ.ಪಿ.ಎಸ್. ರಾವತ್, `ಉತ್ತರಾಖಂಡ ರಕ್ಷಾ ಮೋರ್ಚಾ~ ಎಂಬ ಹೊಸ ಪಕ್ಷವನ್ನು ರಚಿಸಿಕೊಂಡು, ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಭಿನ್ನಮತೀಯ ನಾಯಕರನ್ನು ಸೆಳೆದು ಸ್ಪರ್ಧೆಗೆ ಇಳಿಯುವಂತೆ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.