ADVERTISEMENT

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಯುವರಾಜರ ಪ್ರತಿಷ್ಠೆ ಪಣಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಯುವರಾಜರ ಪ್ರತಿಷ್ಠೆ ಪಣಕ್ಕೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಯುವರಾಜರ ಪ್ರತಿಷ್ಠೆ ಪಣಕ್ಕೆ   

ಲಖನೌ (ಪಿಟಿಐ): ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ದೇಶದ ಪ್ರತಿಷ್ಠಿತ ಗಾಂಧಿ ಮನೆತನದ ಕುಡಿಗಳಾದ ರಾಹುಲ್ ಗಾಂಧಿ, ವರುಣ್ ಗಾಂಧಿ ಸೇರಿದಂತೆ ರಾಜ್ಯದ ಅನೇಕ ರಾಜಕಾರಣಿಗಳ ಕುಟುಂಬದ ಉತ್ತರಾಧಿಕಾರಿಗಳ ಭವಿಷ್ಯ ಮತ್ತು ಅದೃಷ್ಟವನ್ನು `ಅಗ್ನಿ ಪರೀಕ್ಷೆ~ಗೆ ಒಡ್ಡಿದೆ.

ಬಿಹಾರದಲ್ಲಿ ಪಕ್ಷ ದಯನೀಯ ಸೋಲು ಕಂಡ ಬಳಿಕ ಉತ್ತರ ಪ್ರದೇಶ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಎಲ್ಲ ಶಕ್ತಿ ಮತ್ತು ಯುಕ್ತಿಯನ್ನೂ ಧಾರೆ ಎರೆದು ತಮ್ಮ ಸಾಮರ್ಥ್ಯ ತೋರಿಸಲು ಅವರು ಸಿದ್ಧರಾಗಿದ್ದಾರೆ. ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿರುವ ರಾಹುಲ್ ರಾಜಕೀಯ ಮಹತ್ವಾಕಾಂಕ್ಷೆಗೆ ಈ ಚುನಾವಣೆ ಸೂಕ್ತ ವೇದಿಕೆ ಹಾಗೂ ಮಹತ್ವದ ಮೆಟ್ಟಿಲಾಗಲಿದೆ ಎಂದೇ ಹೇಳಲಾಗುತ್ತಿದೆ.

ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಹಾಗೂ ಸಮಾಜವಾದಿ ಪಕ್ಷದ ಯುವರಾಜ ಅಖಿಲೇಶ್ ಯಾದವ್, ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ಅವರ ರಾಜಕೀಯ ಭವಿಷ್ಯವನ್ನೂ ಚುನಾವಣೆ ನಿರ್ಧರಿಸಲಿದೆ.

ಆರ್‌ಎಲ್‌ಡಿ ಈಚೆಗೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಕಾರಣ ಜಯಂತ್, ರಾಹುಲ್ ಜತೆ ಕೈಜೋಡಿಸಲಿದ್ದಾರೆ. ಯುವ ಮತದಾರರನ್ನು ಸೆಳೆಯಲು ಬಿಜೆಪಿಯು ವರುಣ್ ಗಾಂಧಿ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ ನಾಲ್ಕು ಕೋಟಿಗೂ ಹೆಚ್ಚು 18ರಿಂದ 30 ವರ್ಷದೊಳಗಿನ ಯುವ ಮತದಾರರು ಇಲ್ಲಿದ್ದು, ಬಹುತೇಕ ಎಲ್ಲ ಪಕ್ಷಗಳೂ ಅವರ ಮೇಲೆ ಕಣ್ಣಿಟ್ಟಿವೆ.

ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡು ಸುಮಾರು 22 ವರ್ಷಗಳಾಗಿವೆ. ಶತಾಯಗತಾಯ ಈ ಬಾರಿ ಅಧಿಕಾರ ಹಿಡಿಯಲೇಬೇಕು ಎನ್ನುವ ಪ್ರಯತ್ನ ರಾಹುಲ್ ಅವರದ್ದು.

ಅದಕ್ಕಾಗಿ  ಅನೇಕ ವರ್ಷಗಳಿಂದ ಅವರು ಇಲ್ಲಿ ಬೆವರು ಹರಿಸುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂಸಂಚರಿಸಿದ್ದಾರೆ. ಪೊಲೀಸ್ ಮತ್ತು ರೈತರ ನಡುವೆ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಭಟ್ಟಾ ಪಾರಸೂಲ್‌ನ ಗೌತಮ್ ಬುದ್ಧ ನಗರದಿಂದ ಪ್ರಚಾರ ಆರಂಭಿಸಿದ್ದಾರೆ. 

 ಅಖಿಲೇಶ್ ಯಾದವ್ ಈ ಬಾರಿ ಸಮಾಜವಾದಿ ಪಕ್ಷದ ಸಾರಥ್ಯ ವಹಿಸ್ದ್ದಿದು, ಅವರ ಹೆಗಲ ಮೇಲೆ ದೊಡ್ಡ ಹೊಣೆ ಇದೆ. ಈಗಾಗಲೇ ಅವರು ಎಂಟು ಸುತ್ತಿನ `ಕ್ರಾಂತಿ ರಥಯಾತ್ರೆ~ಯ ಮೂಲಕ ರಾಜ್ಯವನ್ನು ಸುತ್ತಿ ಬಂದಿದ್ದಾರೆ.
ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿಯೂ ಅತ್ಯಂತ ಎಚ್ಚರಿಕೆ ವಹಿಸಿದ್ದಾರೆ.

ಅನೇಕರನ್ನು ಬದಲಿಸಿ, ಗೆಲ್ಲುವ ಸಾಧ್ಯತೆ ಇರುವ ಹೊಸಬರಿಗೆ ಅವರು ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.