ADVERTISEMENT

ಎಎಪಿಗೆ ಪಕ್ಷೇತರ ಶಾಸಕನ ಬೆಂಬಲ ವಾಪಸ್‌

ಜನಲೋಕಪಾಲ ಮಸೂದೆ: ತೀವ್ರಗೊಂಡ ಕೇಜ್ರಿವಾಲ್‌– ಕಾಂಗ್ರೆಸ್‌ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 19:30 IST
Last Updated 10 ಫೆಬ್ರುವರಿ 2014, 19:30 IST
ಎಎಪಿಗೆ ಪಕ್ಷೇತರ ಶಾಸಕನ ಬೆಂಬಲ ವಾಪಸ್‌
ಎಎಪಿಗೆ ಪಕ್ಷೇತರ ಶಾಸಕನ ಬೆಂಬಲ ವಾಪಸ್‌   

ನವದೆಹಲಿ (ಪಿಟಿಐ): ಎಎಪಿ ಶಾಸಕ ವಿನೋದ್‌ ಕುಮಾರ್  ಬಿನ್ನಿ ಅವರನ್ನು ಪಕ್ಷದಿಂದ ಉಚ್ಚಾಟಿ­ಸಿದ ಬೆನ್ನಲ್ಲೇ ದೆಹಲಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ರಾಂಬೀರ್‌ ಶೊಕೀನ್‌  ಬೆಂಬಲ ವಾಪಸ್‌ ಪಡೆದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನೀಡಿದ್ದ  ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಿದೆ. ಹಾಗಾಗಿ ಬೆಂಬಲ ವಾಪಸ್‌ ಪಡೆಯುವುದಾಗಿ ರಾಂಬೀರ್‌ ಹೇಳಿದ್ದಾರೆ. ಜನ ಲೋಕಪಾಲ ಮಸೂದೆ ಮಂಡನೆ ವಿಷಯ­ದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಮತ್ತು ಕಾಂಗ್ರೆಸ್‌ ನಡುವೆ ಸಂಘರ್ಷ ತೀವ್ರವಾಗಿದೆ. ಮಸೂದೆ ಅಂಗೀಕಾರವಾಗದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್‌ ಸೋಮವಾರ ಸಹ ಪುನರುಚ್ಚರಿಸಿದರು.

ಸರ್ಕಾರ ಬೀಳಿಸಲ್ಲ: ‘ಸರ್ಕಾರ ಬೀಳಿಸುವುದಕ್ಕಾಗಿ ಯತ್ನಿಸುತ್ತಿಲ್ಲ. ಆದರೆ ಸರ್ಕಾರದ ಉಳಿವಿನ ಬಗ್ಗೆ ಅತಿಯಾದ ಕಾಳಜಿಯೂ ಇಲ್ಲ. ನಾಳೆ ಬೀಳುವ ಸರ್ಕಾರ ಇಂದೇ ಬಿಳಲಿ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕಾಂಗ್ರೆಸ್‌ ಯಾವಾಗ ಬೇಕಿದ್ದರೂ ಸರ್ಕಾರ ಬೀಳಿಸಬಹುದಲ್ಲ ಎಂಬ ಚಿಂತೆ ಇದೆಯೇ ಎಂಬ ಪ್ರಶ್ನೆಗೆ, ‘ಅದು ಅವರ ಸಮಸ್ಯೆ. ಹಾಗಿದ್ದರೆ ಅವರು ಬೆಂಬಲ ನೀಡಿದ್ದು ಯಾಕೆ?’ ಎಂದು ಕೇಜ್ರಿವಾಲ್ ಮರು ಪ್ರಶ್ನೆ ಕೇಳಿದ್ದಾರೆ. 

ಬಲಾಬಲ: 70 ಸದಸ್ಯರ ದೆಹಲಿ ವಿಧಾನಸಭೆ­ಯಲ್ಲಿ ಎಎಪಿ ಸಭಾಧ್ಯಕ್ಷರು ಸೇರಿ  27 ಸದಸ್ಯರನ್ನು ಹೊಂದಿದೆ. ವಿನೋದ್‌ ಕುಮಾರ್‌ ಬಿನ್ನಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಕಾಂಗ್ರೆಸ್‌ ಎಂಟು ಶಾಸಕರನ್ನು ಹೊಂದಿದ್ದು, ಅವರ ಬೆಂಬಲದ ಮೇಲೆಯೇ ಸರ್ಕಾರ ನಿಂತಿದೆ.  ಪ್ರತಿಪಕ್ಷ ಬಿಜೆಪಿಯಲ್ಲಿ 32 ಶಾಸಕರಿದ್ದಾರೆ.

ರ್ಕಾರ ನಡೆಸುವ ಸಾಮರ್ಥ್ಯವಿಲ್ಲ: ಬಿಜೆಪಿ
‘ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಭುಜದ ಮೇಲೆ ಕುಳಿತಿರುವ ಕೇಜ್ರಿವಾಲ್ ಜನಲೋಕಪಾಲ ಮಸೂದೆ ಅಂಗೀಕರಿಸಲು ಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್ ಹೇಳಿದ್ದಾರೆ.

ಕೇಜ್ರಿವಾಲ್‌–ಜಂಗ್‌ ಭೇಟಿ: ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರನ್ನು ಸೋಮವಾರ ಕೇಜ್ರಿವಾಲ್‌ ಭೇಟಿಯಾಗಿ ಜನ ಲೋಕಪಾಲ ಮಸೂದೆಗೆ ಸಂಬಂಧಿಸಿದ ವಿಚಾರಗಳ ಚರ್ಚೆ ನಡೆಸಿದರು.

ವಿಧಾನ ಸಭೆಯಲ್ಲಿ ಮಸೂದೆ ಮಂಡನೆ ಬಗ್ಗೆ ಸರ್ಕಾರದ ನಿಲುವನ್ನು ಜಂಗ್‌ ಅವರಿಗೆ ಕೇಜ್ರಿವಾಲ್‌ ವಿವರಿಸಿದ್ದಾರೆ ಎನ್ನಲಾಗಿದೆ.
ಭಾರ್ತಿ ಪದಚ್ಯುತಿಗೆ ಆಗ್ರಹ: ದೆಹಲಿ ಸರ್ಕಾರದ ಕಾನೂನು ಸಚಿವ ಸೋಮನಾಥ ಭಾರ್ತಿ ಅವರ ಪದಚ್ಯುತಿಗೆ ಆಗ್ರಹಿಸಿ, ಪ್ರತಿಪಕ್ಷ ನಾಯಕ ಹರ್ಷವರ್ಧನ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.