ADVERTISEMENT

ಎಐಸಿಸಿಯಲ್ಲಿ ಬದಲಾವಣೆ ಸಾಧ್ಯತೆ

ಕೃಷ್ಣ ಬೈರೇಗೌಡಗೆ ಪ್ರಮುಖ ಹುದ್ದೆ?

​ಪ್ರಜಾವಾಣಿ ವಾರ್ತೆ
Published 21 ಜನವರಿ 2013, 19:59 IST
Last Updated 21 ಜನವರಿ 2013, 19:59 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಉಪಾಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದಂತೆಯೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸಾಧ್ಯತೆಗಳು ಗೋಚರಿಸಿವೆ.

ಪ್ರಧಾನ ಕಾರ್ಯದರ್ಶಿಗಳ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಮಾತುಗಳು ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಳಿಬರುತ್ತಿವೆ.ಇನ್ನು 15 ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಪಟ್ಟಿಯಲ್ಲಿ  ಕರ್ನಾಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ, ಅಶೋಕ್ ತನ್ವೀರ್, ಮೀನಾಕ್ಷಿ ನಟರಾಜನ್, ಸಂಸದರಾದ ಜ್ಯೋತಿ ಮಿರ್ಧಾ, ದೀಪೇಂದರ್ ಹೂಡಾ ಮತ್ತಿತರ ಹೆಸರುಗಳು ಇವೆ.

`ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ'
ರಾಹುಲ್ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಸಂಭ್ರಮ ಪಡುತ್ತಿರುವ ಪಕ್ಷದ ಕಾರ್ಯಕರ್ತರು, ಮುಂದಿನ ಚುನಾವಣೆಯಲ್ಲಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಆರಂಭಿಸಿದ್ದಾರೆ.

ಅಲ್ಲದೇ, ಎಐಸಿಸಿ ಚಿಂತನಾ ಶಿಬಿರದಲ್ಲಿ ರಾಹುಲ್ ಗಾಂಧಿ  ಅವರು ಮಾಡಿರುವ ಭಾಷಣದಿಂದ ಉತ್ತೇಜಿತರಾಗಿರುವ ಕಾಂಗ್ರೆಸ್ಸಿಗರು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಾಮರ್ಥ್ಯ ರಾಹುಲ್ ಅವರಿಗೆ ಮಾತ್ರ ಎಂದಿದ್ದಾರೆ.

`ರಾಹುಲ್ ಗಾಂಧಿ ಅವರಿಗೆ ಬಡ್ತಿ ನೀಡಿರುವುದು ದೇಶದ ಯುವ ಪೀಳಿಗೆಗೆ ನೈತಿಕ ಬಲ ತುಂಬಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಈ ದೇಶದ ಜನತೆ ಅವರ ನಾಯಕತ್ವಕ್ಕೆ ಬೆಂಬಲ ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ' ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರಮೇಶ್ ಚೆನ್ನಿಥಾಲ ಸೋಮವಾರ ಹೇಳಿದ್ದಾರೆ.

ರಾಹುಲ್ ಅವರಿಗೆ ಬಡ್ತಿ ನೀಡಿರುವುದನ್ನು ಹೆಚ್ಚಿನ ಕಾಂಗ್ರೆಸ್ಸಿಗರು ಶ್ಲಾಘಿಸಿದ್ದು, `ರಾಹುಲ್ ಮಾತ್ರ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿರುವ ಬೆಳವಣಿಗೆಯನ್ನು `ಐತಿಹಾಸಿಕ ಮುನ್ನಡೆ' ಎಂದು  ಹಲವು ಮುಖಂಡರು ಬಣ್ಣಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಯುವಕರಿಗೆ ಮಣೆ ಹಾಕಲು ಒಡಿಶಾ ಕಾಂಗ್ರೆಸ್ ಸಮಿತಿ ಚಿಂತನೆ ನಡೆಸಿದೆ. ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ಯುವಕರಿಗೆ ನೀಡುವ ಮೂಲಕ ಯುವ ಪೀಳಿಗೆಗೆ ಉತ್ತೇಜನ ನೀಡಲು ಯೋಜಿಸಲಾಗುತ್ತಿದೆ ಎಂದು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿರಂಜನ್ ಪಟ್ನಾಯಿಕ್ ಅವರು ಹೇಳಿದ್ದಾರೆ.

`ರಾಹುಲ್ ಗಾಂಧಿ ಅವರು ಮಾತ್ರ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ಅನಿಲ್ ಶಾಸ್ತ್ರಿ ಕಿರು ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. `ಎಲ್ಲರ ಕಣ್ಣು ರಾಹುಲ್ ಗಾಂಧಿ ಅವರ ಮೇಲಿದೆ. 2014ರ ಚುನಾವಣೆಯಲ್ಲಿ ಅವರು ಪಕ್ಷದ ನೇತೃತ್ವ ವಹಿಸಲಿದ್ದಾರೆ.

`ಯುಪಿಎ-3' ಅಧಿಕಾರಕ್ಕೆ ಬರುವ ದಿನ ದೂರವಿಲ್ಲ. ಸಾಮಾನ್ಯ ಪ್ರಜೆಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ' ಎಂದು ಶಾಸ್ತ್ರಿ ಬರೆದಿದ್ದಾರೆ. ಜೈಪುರದಲ್ಲಿ ನಡೆದ ಚಿಂತನಾ ಶಿಬಿರ `ಭಾರಿ ಯಶಸ್ವಿ'ಯಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT