ADVERTISEMENT

ಎನ್‌ಸಿಟಿಸಿ: ಕಟು ವಿರೋಧ

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್):  ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ), ರಾಜ್ಯ ಪೊಲೀಸರ ಅಧಿಕಾರಕ್ಕೆ ಧಕ್ಕೆಯೊಡ್ಡಲಿದೆ ಎಂದಿರುವ ಕಾಂಗ್ರೆಸ್ಸೇತರ ರಾಜ್ಯ ಸರ್ಕಾರಗಳು `ಎನ್‌ಸಿಟಿಸಿ~ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಹಾಗಾಗಿ ಈ ಕುರಿತ ಒಪ್ಪಂದ ಮರೀಚಿಕೆಯಾಗುವ ಎಲ್ಲ ಲಕ್ಷಣಗಳಿವೆ.

 

ಕಾನೂನು ಮಾರ್ಪಾಡಿಗೆ ಆಗ್ರಹ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಲು ಉದ್ದೇಶಿತ `ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ~ (ಎನ್‌ಸಿಟಿಸಿ) ಸ್ಥಾಪನೆಗೆ ಸಂಬಂಧಿಸಿದ ಕಾನೂನಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕು ಎಂದು ಸಿ.ಎಂ. ಸದಾನಂದಗೌಡ ಶನಿವಾರ ಆಗ್ರಹಿಸಿದರು.  

ADVERTISEMENT

ಈ ಸಂಬಂಧ ದೆಹಲಿಯಲ್ಲಿ ಶನಿವಾರ ನಡೆದ ಮಹತ್ವದ ಸಮಾವೇಶದಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ. ಚಿದಂಬರಂ ಮಾಡಿಕೊಂಡ ಮನವಿಗೆ ಸ್ಪಂದಿಸದ ಕಾಂಗ್ರೆಸ್ಸೇತರ ಸರ್ಕಾರಗಳ ಮುಖ್ಯಮಂತ್ರಿಗಳು, `ಎನ್‌ಸಿಟಿಸಿ~ ಸ್ಥಾಪನೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್‌ನ ನಾಯಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಮುಖ್ಯಮಂತ್ರಿಗಳು `ಎನ್‌ಸಿಟಿಸಿ~ಗೆ ವಿರೋಧ ವ್ಯಕ್ತಪಡಿಸಿದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ವಿರುದ್ಧ ನಡೆಸಿದ ವಾಗ್ದಾಳಿಯನ್ನು ಪ್ರಧಾನಿ ಸಿಂಗ್ ಮತ್ತು ಚಿದಂಬರಂ ಮೌನವಾಗಿ ಆಲಿಸಿದರು.

ತರಾಟೆ: `ಎನ್‌ಸಿಟಿಸಿ~ ರಚನೆಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಮಮತಾ, ಬಂಧನ ಮತ್ತು ವಶಪಡಿಸಿಕೊಳ್ಳುವ ಅಧಿಕಾರವಿರುವ ಎನ್‌ಸಿಟಿಸಿ ಪ್ರಸ್ತಾವ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ ಕೇಂದ್ರ ಈ ಸಂಬಂಧ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಿಎಂಗಳ ಉಪಸಮಿತಿಗೆ ಜಯಾ ಆಗ್ರಹ: `ಎನ್‌ಸಿಟಿಸಿ~ಯನ್ನು ಪ್ರಬಲವಾಗಿ ವಿರೋಧಿಸಿದ ಎಐಎಡಿಎಂಕೆ ನಾಯಕಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, `ಕೇಂದ್ರವು ದೇಶವನ್ನು ನಿರಂಕುಶ ಆಡಳಿತದತ್ತ ಕೊಂಡೊಯ್ಯುತ್ತಿದೆ~ ಎಂದು ಆರೋಪಿಸಿದರಲ್ಲದೆ, ಪ್ರಸ್ತಾವಿತ ಸಂಸ್ಥೆಯಲ್ಲಿ ಮುಖ್ಯಮಂತ್ರಿಗಳ ಉಪಸಮಿತಿಯೊಂದನ್ನು ರಚಿಸುವಂತೆ ಒತ್ತಾಯಿಸಿದರು.

ತಮ್ಮ ರಾಜಕೀಯ ವಿರೋಧಿ ಚಿದಂಬರಂ ನೇತೃತ್ವದ ಗೃಹ ಸಚಿವಾಲಯದ ಮೇಲೆ ವಾಗ್ಬಾಣ ಎಸೆದ ಅವರು, `ಎನ್‌ಸಿಟಿಸಿ ರಚನೆಯ ಆದೇಶ ಪ್ರತಿಯನ್ನು ಕೂಡ ರಾಜ್ಯಕ್ಕೆ ಕಳುಹಿಸದ ಕೇಂದ್ರ ಸರ್ಕಾರ ತಮಿಳುನಾಡಿನತ್ತ ತಾತ್ಸಾರ ಧೋರಣೆ ತೋರಿದೆ~ ಎಂದು ದೂಷಿಸಿದರು.

ನಿರಕುಂಶ ಪ್ರಭುತ್ವ: `ಕೇಂದ್ರವು ಹಿಂದಿನ ಕಾಲದ ವೈಸ್‌ರಾಯ್‌ಗಳಂತೆ ವರ್ತಿಸುತ್ತಿದೆ~ ಎಂದು ಆಪಾದಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, `ಕೇಂದ್ರ ಸರ್ಕಾರವು ರಾಜ್ಯಗಳನ್ನು ಅವಲಂಬಿತ ಸಾಮಂತರಂತೆ ನೋಡುವ ತಂತ್ರಗಾರನಂತೆ ಕಾಣುತ್ತಿದೆ~ ಎಂದು ತರಾಟೆಗೆ ತೆಗೆದುಕೊಂಡರು.

`ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸ್ಪಷ್ಟ ದೂರದೃಷ್ಟಿ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದ ಮೋದಿ, ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ಅಂಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಗ್ರವಾದದ ವಿರುದ್ಧ ಹೋರಾಡುವ ತಂತ್ರಗಾರಿಕೆ ರೂಪಿಸಬೇಕಿದೆ~ ಎಂದರು.  ಈ ಹಿಂದಿನ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಕೆಲ ತಿದ್ದುಪಡಿ ತಂದಿರುವುದಕ್ಕೆ ಮೋದಿ ಹರ್ಷ ವ್ಯಕ್ತಪಡಿಸಿದರು.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಯನ್ನು ವಿರೋಧಿಸಿದರು. 

 
ಇದರಲ್ಲಿ ಕಾನೂನಾತ್ಮಕ ಲೋಪವಾಗಿದೆ ಎಂದ ಅವರು,ಸಂಸತ್ತಿನ ಶಾಸನನ ಮೂಲಕ ಇಂತಹ ಸಂಸ್ಥೆ ಸ್ಥಾಪಿಸಬೇಕು ಎಂದರು.

`ಎನ್‌ಸಿಟಿಸಿ ದುರ್ಬಳಕೆ ಸಾಧ್ಯತೆ ಇರುವುದರಿಂದ ಅದನ್ನು ಈ ರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ~ ಎಂದು ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದರು.

ಕಾಂಗ್ರೆಸ್‌ನ ಮತ್ತೊಂದು ಮಿತ್ರಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಸಹ ಈಗಿರುವ ರೂಪದಲ್ಲೇ `ಎನ್‌ಸಿಟಿಸಿ~ ಸ್ಥಾಪಿಸುವುದನ್ನು ಖಂಡಿಸಿದ್ದು, ಇದು ಮತ್ತೊಂದು `ಆಫ್ಸ್ಪಾ~ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ) ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿತು.

ಈ ಮಧ್ಯೆ ಛತ್ತೀಸ್‌ಗಡ ಮುಖ್ಯಮಂತ್ರಿ ಬಿಜೆಪಿ ನಾಯಕ ರಮಣ್‌ಸಿಂಗ್, ತಮ್ಮ ಸಲಹೆಗಳನ್ನು ಅಳವಡಿಸಿಕೊಂಡು  `ಎನ್‌ಸಿಟಿಸಿ~ಗೆ ಸೂಕ್ತ ಬದಲಾವಣೆ ತಂದಿದ್ದೇ ಆದಲ್ಲಿ ಅದನ್ನು ಬೆಂಬಲಿಸುವುದಾಗಿ ತಿಳಿಸಿದರು.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸಹ  `ಎನ್‌ಸಿಟಿಸಿ~ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು.

ಒಗ್ಗಟ್ಟಿನ ಯತ್ನ: ಇದಕ್ಕೂ ಮುನ್ನ ಮಾತನಾಡಿದ  ಪ್ರಧಾನಿ ಮನಮೋಹನ್ ಸಿಂಗ್, `ಎನ್‌ಸಿಟಿಸಿ~ ಸ್ಥಾಪನೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ತಿಕ್ಕಾಟದ ವಿಚಾರವಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ದೇಶ ಒಗ್ಗಟ್ಟಿನಿಂದ ಕೈಗೊಳ್ಳಬೇಕಾದ ಯತ್ನ ಎಂದರು.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ `ಎನ್‌ಸಿಟಿಸಿ~ ರಾಜ್ಯಗಳ ಕೈ ಬಲಪಡಿಸುತ್ತದೆಯೇ ಹೊರತೂ ಅದನ್ನು ದುರ್ಬಲಗೊಳಿಸುವುದಿಲ್ಲ. ಹಾಗಾಗಿ ರಾಜ್ಯಗಳು ಈ ನಿಟ್ಟಿನಲ್ಲಿ ಕೇಂದ್ರದ ಜತೆ ಕೆಲಸ ಮಾಡಬೇಕು ಎಂದೂ ಪ್ರಧಾನಿ ಮನವಿ ಮಾಡಿಕೊಂಡರು.

`ಎನ್‌ಸಿಟಿಸಿ~ ಪ್ರಸ್ತಾಪವನ್ನು ಮುಂದಿಡಲು ಕಾರಣರಾದ ಗೃಹ ಸಚಿವ ಪಿ. ಚಿದಂಬರಂ, ಭಯೋತ್ಪಾದಕರಿಗೆ ಗಡಿಯ ಹಂಗಿಲ್ಲ. ದೇಶವನ್ನು ಸುರಕ್ಷಿತ ಹಾಗೂ ಸುಭದ್ರಗೊಳಿಸಲು ಕೇಂದ್ರ ಹಾಗೂ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

`ಭಯೋತ್ಪಾದಕರ ಇರುವಿಕೆ ಬಗ್ಗೆ ನಿರ್ದಿಷ್ಟ ಸೂಚನೆ ನೀಡಿದ ಸಂದರ್ಭದಲ್ಲೂ ಸಂಬಂಧಿಸಿದ ಭದ್ರತಾ ಸಂಸ್ಥೆಗಳು ಸಿಬ್ಬಂದಿ ಅಭಾವ ಅಥವಾ ಸಕಾಲಿಕ ನಿರ್ಧಾರದ ಕೊರತೆಯಿಂದ ಕ್ರಮ ಕೈಗೊಳ್ಳದ ಘಟನೆಗಳು ಈ ಹಿಂದೆ ನಡೆದಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಜಿಹಾದಿ ಉಗ್ರರು ಅಥವಾ ಮಾವೊವಾದಿ ಉಗ್ರರಿಗೆ ಸಂಬಂಧಿಸಿವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಏನು ಮಾಡಲು ಸಾಧ್ಯ?~ ಎಂದು ಚಿದಂಬರಂ ಪ್ರಶ್ನಿಸಿದರು.

ಸಂವಿಧಾನದ ಪ್ರಕಾರ ಭಯೋತ್ಪಾದನೆ ನಿಗ್ರಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ ಯಾಗಿರುವುದರಿಂದ, `ಎನ್‌ಸಿಟಿಸಿ~ ನಮ್ಮ ಭದ್ರತಾ ವ್ಯವಸ್ಥೆಯ ಹೊಸ ಸ್ತಂಭವಾಗಲಿದೆ ಎಂದು ಗೃಹ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.