ADVERTISEMENT

ಎನ್‌ಸಿಟಿಸಿ: ಶೀಘ್ರವೇ ಪೊಲೀಸ್ ಮುಖ್ಯಸ್ಥರ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಭಯೋತ್ಪಾದಕರನ್ನು ನಿಗ್ರಹಿಸುವುದು ಕೇಂದ್ರ ಮತ್ತು ರಾಜ್ಯಗಳ ಜಂಟಿ ಜವಾಬ್ದಾರಿಯಾಗಿದ್ದು, ಒಟ್ಟಿಗೇ ಈ ಸಮಸ್ಯೆಯನ್ನು ಎದುರಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.

ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಕೇಂದ್ರ  ಸ್ಥಾಪನೆಯ ಬಗ್ಗೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಗೃಹ ಸಚಿವರು ಕರ್ನಾಟಕ ಸೇರಿದಂತೆ ಕಾಂಗ್ರೆಸ್‌ಯೇತರ ರಾಜ್ಯಗಳ 10 ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶೀಘ್ರದಲ್ಲಿಯೇ ಕೇಂದ್ರ ಗೃಹ ಕಾರ್ಯ ದರ್ಶಿ ಅವರು ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರ ಸಭೆ ಕರೆದು ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಕೇಂದ್ರದ ವ್ಯಾಪ್ತಿ ಮತ್ತು ಕಾರ್ಯಗಳ ಬಗ್ಗೆ ವಿವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಒಡಿಶಾ, ಬಿಹಾರ, ಗುಜರಾತ್, ಪಶ್ಚಿಮಬಂಗಾಳ, ತಮಿಳುನಾಡು, ಹಿಮಾಚಲಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ ಮತ್ತು ತ್ರಿಪುರಾ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದಾರೆ.
`ಭಯೋತ್ಪಾದನೆ ನಮ್ಮ ದೇಶದ ಭದ್ರತೆ ಮತ್ತು ಜನರ ಜೀವಕ್ಕೆ ಅಪಾಯ ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದು, ಈ ಸಮಸ್ಯೆಯನ್ನು ಒಟ್ಟಾಗಿ ಎದುರಿಸೋಣ~ ಎಂದಿದ್ದಾರೆ.

ತಮ್ಮ ಜತೆ ಸಮಾಲೋಚಿಸದೆ ಗೃಹ ಸಚಿವಾಲಯವು ಭಯೋತ್ಪಾದಕ ನಿಗ್ರಹ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದು ಸರಿಯಲ್ಲ ಎಂದು ಕೆಲವು ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿ ಅವರಿಗೆ ಪತ್ರ ಬರೆದು ದೂರಿದ್ದರ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ಚಿದಂಬರಂಗೆ ಸೂಚಿಸಿದ್ದರು.

`ಇದೊಂದು ರಾಷ್ಟ್ರೀಯ ಮಹತ್ವದ ವಿಚಾರ ಎಂಬುದನ್ನು ನೀವೆಲ್ಲ ಒಪ್ಪಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ~ ಎಂದು ಚಿದಂಬರಂ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.