ADVERTISEMENT

ಏರ್‌ಸೆಲ್ ಮ್ಯಾಕ್ಸಿಸ್ ಹಗರಣದ ಸಿಬಿಐ ತನಿಖೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಏರ್‌ಸೆಲ್ ಮ್ಯಾಕ್ಸಿಸ್ ಹಗರಣದ ಸಿಬಿಐ ತನಿಖೆ
ಏರ್‌ಸೆಲ್ ಮ್ಯಾಕ್ಸಿಸ್ ಹಗರಣದ ಸಿಬಿಐ ತನಿಖೆ   

ನವದೆಹಲಿ (ಪಿಟಿಐ): ದೂರ ಸಂಪರ್ಕ ಇಲಾಖೆ ಮಾಜಿ ಸಚಿವ ದಯಾನಿಧಿ ಮಾರನ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ಏರ್‌ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶೀಘ್ರವೇ ಬರ್ಮುಡಾ ಮತ್ತು ಬ್ರಿಟನ್‌ಗಳಿಗೆ ನ್ಯಾಯಾಂಗದ ಮೂಲಕವೇ ಮನವಿ ಸಲ್ಲಿಸಲಿದೆ.

ಆ ದೇಶಗಳಲ್ಲಿ ಏರ್‌ಸೆಲ್ ಮ್ಯಾಕ್ಸಿಸ್ ಸಂಸ್ಥೆಯ ವ್ಯವಹಾರ ಹಾಗೂ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಿಬಿಐ ನಿರ್ಧರಿಸಿದ್ದು, ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ನಡೆದಿದೆ.

ಮಲೇಷ್ಯಾದ ಟೆಲಿಕಾಂ ಕಂಪೆನಿಯಿಂದ ಮಾರನ್ ಅವರು ಸುಮಾರು 547 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಮಾರನ್ ಅಲ್ಲಗಳೆದಿದ್ದಾರೆ.

ಏರ್‌ಸೆಲ್ ಮ್ಯಾಕ್ಸಿಸ್‌ನ ಹಣಕಾಸು ವ್ಯವಹಾರಗಳನ್ನು ಪರಿಶೀಲನೆ ನಡೆಸುತ್ತಿರುವ ತನಿಖಾ ಸಂಸ್ಥೆ ಬ್ರಿಟನ್ ಮತ್ತು ಕೆರಿಬಿಯನ್ ದೇಶವಾದ ಬರ್ಮುಡಾಗಳಿಂದ ಭಾರತದ ಕಂಪೆನಿಗಳಿಗೆ ಹಣಕಾಸು ವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿದೆ. ಈ ಕಂಪೆನಿಯ ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ನ್ಯಾಯಾಂಗದ ಮೂಲಕವೇ ಮನವಿ ಕಳುಹಿಸಲು ನಿರ್ಧರಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಬರ್ಮುಡಾ, ಬ್ರಿಟನ್ ಅಲ್ಲದೇ, ಮಲೇಷ್ಯಾ ಮತ್ತು ಮಾರಿಷಸ್‌ಗಳಿಗೂ ಸಿಬಿಐ ಇಂತಹದೇ ಮನವಿ ಮಾಡಲಿದೆ. ಈ ಹಿಂದೆ ಮಲೇಷ್ಯಾ ಮತ್ತು ಮಾರಿಷಸ್‌ಗಳಿಗೆ ಮಾತ್ರ ತನಿಖೆ ವ್ಯಾಪ್ತಿಯನ್ನು ಸೀಮಿತಗೊಳಿಸಿದ್ದ ಸಿಬಿಐ ಈಗ ಬರ್ಮುಡಾ ಮತ್ತು ಬ್ರಿಟನ್‌ಗಳಲ್ಲಿ ಏರ್‌ಸೆಲ್ ಮ್ಯಾಕ್ಸಿಸ್‌ನ ಹಣಕಾಸು ನಿರ್ವಹಣೆ ಕುರಿತು ಮಾಹಿತಿ ಕಲೆ ಹಾಕಲು ನಿರ್ಧರಿಸಿದೆ.

ದಯಾನಿಧಿ ಮಾರನ್ ಜತೆಗೆ ಅವರ ಸಹೋದರ ಹಾಗೂ ಸನ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕಲಾನಿಧಿ ಮಾರನ್, ಮ್ಯಾಕ್ಸಿಸ್ ಕಮ್ಯುನಿಕೇಷನ್ ಅಧ್ಯಕ್ಷ ಟಿ.ಆನಂದ ಕೃಷ್ಣ, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್‌ನ ಹಿರಿಯ ಅಧಿಕಾರಿ ರಾಲ್ಫ್  ಮಾರ್ಷಲ್, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್, ಸನ್ ಟಿವಿ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಗಳ ವಿರುದ್ಧವೂ ಸಿಬಿಐ ಅವ್ಯವಹಾರದ ಆರೋಪ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.