ADVERTISEMENT

ಏರ್ ಇಂಡಿಯಾ ವಿಮಾನ ಅವಾಂತರ: ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ತಿರುವನಂತಪುರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಅಬುಧಾಬಿ-ಕೊಚ್ಚಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಾದ ಅವಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ದಕ್ಷಿಣ ವಲಯ ಮುಖ್ಯಸ್ಥ ಶರತ್ ಶ್ರೀನಿವಾಸ ಅವರು ವಿಮಾನದ ಸಿಬ್ಬಂದಿ ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಪ್ರಯಾಣಿಕರಿಗೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನಾಲಯದ ಭದ್ರತಾ ಘಟಕ ಸೂಚನೆ ನೀಡಿತ್ತಾದರೂ ಇಬ್ಬರು ಗೈರು ಹಾಜರಾಗಿದ್ದರು. ವಿಮಾನ ಕೊಚ್ಚಿಗೆ ವಿಳಂಬವಾಗಿ ತಲುಪಿದ್ದರ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರತಿಭಟನೆ ಕೈಗೊಂಡಿದ್ದು ಇದರ ನಿಜವಾದ ಉದ್ದೇಶ ಏನಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಪ್ರಮುಖವಾಗಿ ಪ್ರಶ್ನಿಸಿದರು.

ಸುಮಾರು ಎರಡು ಗಂಟೆಗಳವರೆಗೆ ವಿಚಾರಣೆ ನಡೆಯಿತು. ಬೆಳಿಗ್ಗೆ 9 ಗಂಟೆಗೆ ವಿಚಾರಣೆಗೆ ಹಾಜರಾಗಲು ಪ್ರಯಾಣಿಕರಿಗೆ ತಿಳಿಸಲಾಗಿತ್ತಾದರೂ ವಿಚಾರಣಾ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ 11.30 ಆಗಿತ್ತು. ಸಾಕಷ್ಟು ರಜೆ ಇಲ್ಲದೆ ದೂರದ ಸ್ಥಳಗಳಿಂದ ತಾವು ಬಂದಿದ್ದಾಗಿ ಪ್ರಯಾಣಿಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.