ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಸಿಬಿಐನಿಂದ ಮಾಜಿ ಸಚಿವ ಚಿದಂಬರಂ ವಿಚಾರಣೆ

ಏಜೆನ್ಸೀಸ್
Published 6 ಜೂನ್ 2018, 16:16 IST
Last Updated 6 ಜೂನ್ 2018, 16:16 IST
ಚಿದಂಬರಂ
ಚಿದಂಬರಂ   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾದಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ನೀಡುವಾಗ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬುಧವಾರ ನಾಲ್ಕು ಗಂಟೆ ವಿಚಾರಣೆಗೆ ಒಳಪಡಿಸಿತು.

ಪೀಟರ್‌ ಮುಖರ್ಜಿ ಹಾಗೂ ಪತ್ನಿ ಇಂದ್ರಾಣಿ ಒಡೆತನದ ಕಂಪನಿ ಐಎನ್‌ಎಕ್ಸ್‌ ಮೀಡಿಯಾ. ಈ ಕಂಪನಿಯಲ್ಲಿ ₹ 305 ಕೋಟಿ ವಿದೇಶಿ ಹೂಡಿಕೆಗೆ ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ಅನುಮತಿ ನೀಡಿತ್ತು. ಅನುಮತಿ ನೀಡುವ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಎನ್ನಲಾಗಿದೆ. ಅಲ್ಲದೇ, ಈ ರೀತಿ ಅನುಮತಿ ನೀಡುವಲ್ಲಿ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರ ಪಾತ್ರವೂ ಇದೆ ಎಂದು ಸಿಬಿಐ ಆರೋಪಿಸಿದೆ.

‘ವಿಚಾರಣೆಗೆ ಹಾಜರಾಗಿದ್ದೆ. ಆದರೆ, ಸಿಬಿಐ ಸಿದ್ಧಪಡಿಸಿರುವ ಆರೋಪಪಟ್ಟಿಯಲ್ಲಿ ನನ್ನ ವಿರುದ್ಧ  ಯಾವುದೇ ಆರೋಪಗಳಿಲ್ಲ’ ಎಂದು ವಿಚಾರಣೆ ಮುಗಿದ ಮೇಲೆ ಮಾಡಿರುವ ಟ್ವೀಟ್‌ನಲ್ಲಿ ಚಿದಂಬರಂ ತಿಳಿಸಿದ್ದಾರೆ.

ADVERTISEMENT

ಜೂನ್‌ 12ರಂದು ಹಾಜರಾಗಲು ಸಮನ್ಸ್: ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗಾಗಿ ಜೂನ್‌ 12ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಪಿ.ಚಿದಂಬರಂ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಮಂಗಳವಾರ ಒಂದು ಸುತ್ತಿನ ವಿಚಾರಣೆ ನಡೆಸಿದೆ. ಈಗ ಹೊಸ ಪ್ರಶ್ನಾವಳಿಯೊಂದಿಗೆ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಸಂಸ್ಥೆ ನಿರ್ಧರಿಸಿದೆ.

ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯನ್ನು (ಎಫ್‌ಐಪಿಬಿ) ಸದ್ಯ ರದ್ದುಗೊಳಿಸಲಾಗಿದೆ. ಆದರೆ, ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಏರ್‌ಸೆಲ್‌–ಮ್ಯಾಕ್ಸಿಸ್‌ ವ್ಯವಹಾರದಲ್ಲಿ ಹೂಡಿಕೆಗೆ ಅನುಮತಿ ನೀಡುವಾಗ ಅನುಸರಿಸಿದ ಕ್ರಮಗಳ ಬಗ್ಗೆ ಮಂಗಳವಾರ ನಡೆದ ವಿಚಾರಣೆ ವೇಳೆ ಚಿದಂಬರಂ ಅವರನ್ನು ಪ್ರಶ್ನಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಪುತ್ರ ಕಾರ್ತಿ ಅವರನ್ನು ಜಾರಿ ನಿರ್ದೇಶನಾಲಯ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.