ADVERTISEMENT

ಕಂಧಮಲ್: ಭಾರಿ ಪ್ರಮಾಣದ ಸ್ಫೋಟಕ ಪತ್ತೆ , ತಪ್ಪಿದ ದುರಂತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 5:55 IST
Last Updated 19 ಅಕ್ಟೋಬರ್ 2011, 5:55 IST

ಭುವನೇಶ್ವರ (ಐಎಎನ್ಎಸ್):  ಅಪಾರ ಪ್ರಮಾಣದಲ್ಲಿ ನೆಲದಲ್ಲಿ ಹೂತಿಟ್ಟ ಸ್ಪೋಟಕವನ್ನು ಮಂಗಳವಾರ ತಡ ರಾತ್ರಿ ಪತ್ತೆ ಮಾಡಿ, ಸೂಕ್ಷ್ಮ ಪ್ರದೇಶವಾದ ಕಂಧಮಲ್ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಲುದ್ದೇಶಿಸಿದ್ದ ಭಾರಿ ಪ್ರಮಾಣದ ಸ್ಫೋಟವನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ಬುಧವಾರ ಇಲ್ಲಿ ಹೇಳಿಕೊಂಡಿದ್ದಾರೆ.

ದಾರಿಂಗಬಾಡಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಗೋಡಿಬಾಲಿ ಗ್ರಾಮದಲ್ಲಿನ ಪ್ರಮುಖ ರಸ್ತೆಯಲ್ಲಿ 100 ಕೆ.ಜಿ ಸ್ಪೋಟಕವನ್ನು ನಾಲ್ಕು ಕಡೆ ನೆಲದಡಿಯಲ್ಲಿ ಇರಿಸಲಾಗಿದ್ದನ್ನು ಪೊಲೀಸರು ಮಂಗಳವಾರ ತಡ ರಾತ್ರಿ ಪತ್ತೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ  ಜೆ.ಎನ್. ಪಂಕಜ್  ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅರೆಸೇನಾಪಡೆ, ಮಾವೋ ನಿಗ್ರಹ ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ ಆ ಪ್ರದೇಶವನ್ನು ಜಾಲಾಡುವ ಸಂದರ್ಭದಲ್ಲಿ ನೆಲದಡಿಯಲ್ಲಿ ಹೂತಿಟ್ಟ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಯಿತು. ಈ ಸ್ಫೋಟಕದಿಂದ ಬಸ್ ಅಥವಾ ದೊಡ್ಡ ಲಾರಿಗಳನ್ನು ಸುಲಭವಾಗಿ ಸ್ಫೋಟಿಸಬಹುದಾಗಿತ್ತು ಎಂದು ಅವರು ವಿವರ ನೀಡಿದ್ದಾರೆ.

ADVERTISEMENT

ಕಳೆದ ವಾರ ದಾರಿಂಗಬಾಡಿ ಪ್ರದೇಶದಲ್ಲಿ ಸಿಪಿಐ (ಎಂ)ನ ಸ್ಥಳೀಯ ಮಾವೋವಾದಿ ನಾಯಕ ಜಗನ್ನಾಥ್ ನಾಯಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆತ ಗುರುವಾರದಂದು 150ಕ್ಕೂ  ಅಧಿಕ ಮಾವೋವಾದಿ ಕಾರ್ಯಕರ್ತರು ಕೇಂದ್ರ ಮೀಸಲು ಪೊಲೀಸ್ ಪಡೆಯ ನೆಲೆ ಹಾಗೂ ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.