ವಾರಣಾಸಿ: `ಕನ್ನಡಿಗರು ಕೂಪಮಂಡೂಕರಲ್ಲ. ವಿಶಾಲ ಹೃದಯಿಗಳು. ಸಾಹಸಿಗಳು. ಆದುದರಿಂದಲೇ ಬೇರೆ ರಾಜ್ಯಗಳಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಂಘಗಳನ್ನು ಸ್ಥಾಪಿಸಿ ಸಂಘಟಿತರಾಗಿದ್ದಾರೆ~ ಎಂದು ಕಾಶಿಯ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಅವರು ಇಲ್ಲಿ ನಡೆದ ವಿವಿಧ ರಾಜ್ಯಗಳಲ್ಲಿರುವ ಕನ್ನಡ ಸಂಘಗಳ ಎರಡನೇ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿಶ್ವದಲ್ಲಿ ಜೀವಂತ ನಗರಿ ಎಂದರೆ ಕಾಶಿ.
ಕರ್ನಾಟಕದಿಂದ ಉನ್ನತ ಅಧ್ಯಯನಕ್ಕಾಗಿ ಕಾಶಿಗೆ ಬರುವ ಎಲ್ಲ ಸಂಪ್ರದಾಯಗಳ ಮಠಾಧಿಪತಿಗಳಿಗೆ ಆಶ್ರಯಕೊಟ್ಟ ಜಂಗಮವಾಡಿ ಮಠವು ಕನ್ನಡ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಅನುಕೂಲತೆ ಮಾಡಿಕೊಟ್ಟಿದೆ.
ಇಲ್ಲಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಡಿಪ್ಲೊಮಾ ಕೋರ್ಸ್‌ನ್ನು ಪ್ರಾರಂಭಿಸಿದವರು ಜಂಗಮವಾಡಿ ಮಠದ ವಿದ್ಯಾರ್ಥಿಗಳು ಎಂದು ಅವರು ಹೇಳಿದರು.
ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಿದಂತೆ ಇಲ್ಲಿನ ಮಹಾತ್ಮ ಗಾಂಧಿ ವಿದ್ಯಾಪೀಠ ಮತ್ತು ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲೂ ಕನ್ನಡ ಅಧ್ಯಯನ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.