ADVERTISEMENT

ಕಲ್ಲು ತೂರುವವರಿಗೆ ಸದ್ಭಾವನಾ ಪ್ರವಾಸ

ಜಮ್ಮು–ಕಾಶ್ಮೀರ: ಯುವಕರ ಮನಪರಿವರ್ತನೆಗೆ ಮುಂದಾದ ಸೇನೆ

ಪಿಟಿಐ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಕಲ್ಲು ತೂರುವವರಿಗೆ ಸದ್ಭಾವನಾ ಪ್ರವಾಸ
ಕಲ್ಲು ತೂರುವವರಿಗೆ ಸದ್ಭಾವನಾ ಪ್ರವಾಸ   

ಶ್ರೀನಗರ: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಯುವ ಮನಸ್ಸುಗಳನ್ನು ಪರಿವರ್ತಿಸಲು ಭಾರತೀಯ ಸೇನೆ ಮುಂದಾಗಿದೆ.

ಸೇನೆಯ ಸದ್ಭಾವನಾ ಯೋಜನೆಯ ಅಡಿಯಲ್ಲಿ ದಾರಿತಪ್ಪಿದ ಮಕ್ಕಳನ್ನು ತಂಡ ತಂಡವಾಗಿ ದೇಶದಾದ್ಯಂತ ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ ಕೆಲಸವನ್ನು ಅದು ಮಾಡಲಿದೆ.

ಮೊದಲಿಗೆ, ಹಿಂಸಾಚಾರ ಪೀಡಿತ ದಕ್ಷಿಣ ಕಾಶ್ಮೀರದ 20 ಬಾಲಕರ ತಂಡವನ್ನು ದೆಹಲಿ, ಮುಂಬೈ, ಜೈಪುರ ಸೇರಿದಂತೆ ಐತಿಹಾಸಿಕವಾಗಿ ಮಹತ್ವ ಪಡೆದಿರುವ ನಗರಗಳಿಗೆ ಕರೆದೊಯ್ದು, ದೇಶ ಹೇಗಿದೆ, ಯಾವ ರೀತಿ ಅಭಿವೃದ್ಧಿ ಯಾಗುತ್ತಿದೆ ಎಂಬುದನ್ನು ತೋರಿಸಲಾಗುವುದು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಮೇಜರ್‌ ಜನರಲ್‌ ಬಿ.ಎಸ್‌. ರಾಜು  ಅವರು ಈ ಯೋಜನೆ ರೂವಾರಿ. ದಕ್ಷಿಣ ಕಾಶ್ಮೀರದಲ್ಲಿ ನುಸುಳುವಿಕೆ ತಡೆಯುವ ಹೊಣೆ ಹೊತ್ತಿರುವ ವಿಕ್ಟರ್‌ ಪಡೆಯ ಮುಖ್ಯಸ್ಥ ಆಗಿರುವ   ರಾಜು ಅವರು ಕಲ್ಲು ತೂರಾಟ ನಡೆಸುವಾಗ ಸೇನೆಯ ವಶಕ್ಕೆ ಸಿಕ್ಕಿದ್ದ ಹಲವರ ಜೊತೆ ಸಮಾಲೋಚನೆ ನಡೆಸಿದಾಗ ತಿಳಿದು ಬಂದ ಸಂಗತಿಗಳ ಆಧಾರದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ.

‘ಬಾಲ್ಯದಿಂದಲೇ ಕಲ್ಲು ತೂರಾಟ, ಹಿಂಸಾಚಾರವನ್ನು ನೋಡಿಕೊಂಡು ಬಂದಿದ್ದ ಈ ಮಕ್ಕಳು, ದೊಡ್ಡವರಾದ ಮೇಲೆ ಅದನ್ನೇ ಮುಂದುವರಿಸುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು’ ಎಂದು ಮೇಜರ್‌ ಜನರಲ್‌ ರಾಜು ಹೇಳಿದ್ದಾರೆ.

‘ಇವರಲ್ಲಿ ಬಹುತೇಕರು ವಿನೋದಕ್ಕಾಗಿ ಕಲ್ಲು ತೂರುತ್ತಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ರಾಜು ಅವರು ಅನೌಪಚರಿಕವಾಗಿ ಕಲ್ಲು ತೂರಾಟಗಾರರ ಜೊತೆ ಸಮಾಲೋಚನೆ, ಯುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಲು ಆರಂಭಿಸಿದರು.

‘ಅವರು ಕೂಡ ಹಲವು ಕನಸುಗಳನ್ನು ಹೊತ್ತಿದ್ದಾರೆ ಎಂಬುದು ಅವರ ಜೊತೆ ಯಾರು ಮಾತನಾಡಿದರೂ  ಗೊತ್ತಾಗುತ್ತದೆ. ಆದರೆ, ಅನಿರೀಕ್ಷಿತ ಪರಿಸ್ಥಿತಿ, ಕಾರಣಗಳಿಂದಾಗಿ ಆ ಕನಸುಗಳು ರೆಕ್ಕೆಗಳನ್ನು ಹೊಂದಿಲ್ಲ. ಅವುಗಳಿಗೆ ರೆಕ್ಕೆ ಮೂಡಿಸುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಹಾಗಾಗಿ, 20 ಮಕ್ಕಳನ್ನು ದೇಶದಾದ್ಯಂತ ಕರೆದೊಯ್ಯಲು ಯೋಚಿಸಿದೆ’ ಎಂದು ರಾಜು ಹೇಳಿದ್ದಾರೆ.

‘ಈ ಮಕ್ಕಳಿಗೆ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಮೇಲೆ ವಿಶೇಷ ಗೌರವ ಇದ್ದಂತೆ ಕಾಣುತ್ತದೆ. ಭಾರತದ ವೈವಿಧ್ಯದ ಬಗ್ಗೆ ಕಲಾಂ ನೀಡಿರುವ ಹೇಳಿಕೆಗಳನ್ನು ಅವರ ಮುಂದೆ ವಿವರಿಸಿದೆ. ಅದನ್ನು ತದೇಕ ಚಿತ್ತದಿಂದ ಆಲಿಸಿದ ಮಕ್ಕಳು, ಕೆಲವು ಅತ್ಯುತ್ತಮ ಪ್ರಶ್ನೆಗಳನ್ನೂ ಕೇಳಿದರು’ ಎಂದು ಅವರು ವಿವರಿಸಿದ್ದಾರೆ.

ಕಲ್ಲು ತೂರಾಟದಲ್ಲಿ ನಿರತವಾಗಿರುವ ದಕ್ಷಿಣ ಕಾಶ್ಮೀರದ ಬಹುತೇಕ ಯುವಕ –ಯುವತಿಯರು ಕಾಶ್ಮೀರ ಕಣಿವೆಯ ಸೌಂದರ್ಯವನ್ನೇ ಸವಿದಿಲ್ಲ ಎಂಬ ವಿಷಯ  ಅವರೊಂದಿಗೆ ಸೇನಾಧಿಕಾರಿಗಳು  ನಡೆಸಿದ ಸಮಾಲೋಚನೆಗಳಲ್ಲಿ ತಿಳಿದು ಬಂದಿದೆ.

ಹಾಗಾಗಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವವರ ಜೊತೆ ಗುರುತಿಸಿಕೊಂಡಿರುವ ಶೇ 90ರಷ್ಟು ಮಕ್ಕಳು ಮತ್ತು ಆರ್ಮಿ ಗುಡ್‌ವಿಲ್‌ ಶಾಲೆಯ ಹಾಗೂ ಇತರ ಶಾಲೆಗಳ ಶೇ 10ರಷ್ಟು ಮಕ್ಕಳನ್ನು ಗುಲ್‌ಮಾರ್ಗ್‌, ಸೋನಾಮಾರ್ಗ್‌ ಮತ್ತು ಯುಸ್‌ಮಾರ್ಗ್‌ಗಳಿಗೆ ಕರೆದೊಯ್ಯಲೂ ಸೇನೆ ನಿರ್ಧರಿಸಿದೆ.

ಸೇನೆಯ ನಿರೀಕ್ಷೆ
ಸ್ಥಳೀಯ ಪೊಲೀಸರ ಸಹಾಯದಿಂದ ಪ್ರವಾಸಕ್ಕೆ ಕರೆದೊಯ್ಯಬೇಕಾದ ಮಕ್ಕಳನ್ನು ಸೇನೆ ಆಯ್ಕೆ ಮಾಡಲಿದೆ.

ADVERTISEMENT

ಪ್ರವಾಸದಿಂದ ಮರಳಿದ ಬಳಿಕ ಈ ಮಕ್ಕಳು ತಮ್ಮ ಅನುಭವಗಳನ್ನು ಇತರ ಯುವ ಕಾಶ್ಮೀರಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.  ಇದರಿಂದ ಪ್ರೇರಣೆಗೊಂಡು ಉಳಿದ ಮಕ್ಕಳು ಮುಂದಿನ ಪ್ರವಾಸಿ ತಂಡದ ಭಾಗವಾಗಲು ಮುಂದೆ ಬರಬಹುದು ಎಂಬ ನಿರೀಕ್ಷೆಯನ್ನು ಸೇನೆ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.