ADVERTISEMENT

ಕಸಾಯಿಖಾನೆ ಮೇಲೆ ನಿಗಾ ವಹಿಸಲು ಸಮಿತಿ ರಚನೆ

ಬೀಡಾಡಿ ಪ್ರಾಣಿಗಳಿಗೆ ಪುನರ್ವಸತಿ ಬಗ್ಗೆ ಖಾತ್ರಿ

ಪಿಟಿಐ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST

ನವದೆಹಲಿ: ದೇಶದಲ್ಲಿನ ಕಸಾಯಿಖಾನೆಗಳ ತಪಾಸಣೆ ಮಾಡಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು (ಎಡಬ್ಲ್ಯುಬಿಐ) ಸಮಿತಿಯೊಂದನ್ನು ರಚಿಸಿದೆ.

ಬೀಡಾಡಿ ಪ್ರಾಣಿಗಳಿಗೆ ಸರಿಯಾದ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಅದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

‘ಸಣ್ಣ ಪ್ರಾಣಿಗಳು, ವಿಶೇಷವಾಗಿ ಹಸುಗಳನ್ನು ಕಸಾಯಿಖಾನೆಗಳಲ್ಲಿ ವಧೆ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಸಮಿತಿ ತಪಾಸಣೆ ನಡೆಸಿ, ಯಾವುದೇ ಪ್ರಾಣಿಯನ್ನು ಹಿಂಸಾತ್ಮಕವಾಗಿ ಕೊಲ್ಲಲಾಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಿದೆ’ ಎಂದು ಮಂಡಳಿಯ ಅಧ್ಯಕ್ಷ ಎಸ್‌.‍ಪಿ.ಗುಪ್ತಾ ಹೇಳಿದ್ದಾರೆ.

ADVERTISEMENT

‘ದೇಶದಾದ್ಯಂತ ರಸ್ತೆಗಳಲ್ಲಿ ಅಲೆದಾಡುವ ಹಸುಗಳು, ನಾಯಿಗಳು ಮತ್ತು ಮಂಗಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಪ್ರಾಣಿಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಂಡಳಿ ಸಲಹೆ ನೀಡಿದೆ. ಈ ಕ್ರಮಕ್ಕಾಗಿ ಒಂದು ತಿಂಗಳು ಸಮಯ ನೀಡಲಾಗಿದ್ದು, ನಂತರವೂ ದೂರುಗಳು ಕೇಳಿಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

‘ಎಲ್ಲ ಜಿಲ್ಲೆಗಳಲ್ಲಿ ಪ್ರಾಣಿ ಕಲ್ಯಾಣ ಅಧಿಕಾರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಚಲನಚಿತ್ರಗಳ ಚಿತ್ರೀಕರಣದ ವೇಳೆ ಯಾವುದೇ ಪ್ರಾಣಿಗೆ ಹಿಂಸೆ ನೀಡಲಾಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎಂಟು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ’ ಎಂದು ಹೇಳಿದ್ದಾರೆ.

ಹಳ್ಳಿಗಳಲ್ಲಿ ಗೋಮಾಳಗಳ ಪ್ರಮಾಣ ಕ್ಷೀಣಿಸುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಗು‍ಪ್ತಾ, ಕನಿಷ್ಠ 50 ಎಕರೆ ಗೋಮಾಳ ಅಭಿವೃದ್ಧಿಗೆ ₹50 ಲಕ್ಷದವರೆಗೆ ಹಣಕಾಸು ನೆರವು ನೀಡಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

**

ಸ್ಮಾರ್ಟ್‌ ಸಿಟಿಗಳಲ್ಲಿ ‘ಪ್ರಾಣಿ ಹಾಸ್ಟೆಲ್‌’

ನವದೆಹಲಿ: ‘ಸ್ಮಾರ್ಟ್ ಸಿಟಿಗಳಲ್ಲಿ ಪ್ರಾಣಿ ಹಾಸ್ಟೆಲ್‌ಗಳನ್ನು ಸ್ಥಾಪಿಸುವ ಆಲೋಚನೆಯನ್ನು ಎಡಬ್ಲ್ಯುಬಿಐ ಹೊಂದಿದೆ. ಈ ಬಗ್ಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜತೆ ಸಮಾಲೋಚನೆ ನಡೆಸಲಾಗುವುದು’ ಎಂದು ಗುಪ್ತಾ ಹೇಳಿದ್ದಾರೆ.

‘ಸ್ಮಾರ್ಟ್ ಸಿಟಿಗಳಲ್ಲಿ ಬೀಡಾಡಿ ಪ್ರಾಣಿಗಳನ್ನು ಹೊರ ಹಾಕಲಾಗುತ್ತಿದೆ ಎಂಬ ವರದಿಗಳಿವೆ. ಇದಕ್ಕಾಗಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.