ಪಟ್ನಾ: ಬಿಹಾರದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಡುವಣ ಪ್ರಸ್ತಾವಿತ ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮುರಿದು ಬೀಳುವ ಹಂತಕ್ಕೆ ತಲುಪಿದೆ.
ಶುಕ್ರವಾರ ರಾತ್ರಿ ನವದೆಹಲಿಯಿಂದ ಪಟ್ನಾಗೆ ವಾಪಸಾದ ಸಂದರ್ಭದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ನೀಡಿರುವ ಹೇಳಿಕೆ ಇದನ್ನು ಸ್ಪಷ್ಟಪಡಿಸಿದೆ.
‘ಗಟ್ ಬಂಧನ್ ಕಾ ಟೈಮ್ ಖತಮ್ (ಮೈತ್ರಿ ಸಮಯ ಮುಗಿದು ಹೋಗಿದೆ). ಎಲ್ಲಾ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ನಾನು ಯತ್ನಿಸಿದ್ದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಬಿಹಾರದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಬಯಸಿದಂತೆ ತೋರುತ್ತಿದೆ. ನಾನು ಇನ್ನೇನು ಮಾಡುವುದು? ಹಾಗಾಗಿ ನಾನು ಪಟ್ನಾಗೆ ಹಿಂದಿರುಗಿದೆ. ನಾನು ದೀರ್ಘ ಸಮಯದಿಂದ ಕಾಂಗ್ರೆಸ್ ಕಾಲನ್ನು ನೆಕ್ಕುತ್ತಿದ್ದೇನೆ ಎಂದು ನನ್ನ ಪಕ್ಷದ ಕಾರ್ಯಕರ್ತರೇ ಆರೋಪ ಮಾಡಲು ಆರಂಭಿಸಿದ್ದಾರೆ’ ಎಂದು ಕೋಪೋದ್ರಿಕ್ತರಾಗಿದ್ದ ಲಾಲು ಶುಕ್ರವಾರ ರಾತ್ರಿ ಹೇಳಿದ್ದರು.
ಕಾಂಗ್ರೆಸ್ ಪ್ರತಿಕ್ರಿಯೆ: ಲಾಲು ಅವರೊಂದಿಗೆ ಮಾತುಕತೆ ಮುರಿದು ಬಿದ್ದಿದೆ ಎಂದು ಕಾಂಗ್ರೆಸ್‌ನ ಮೂಲಗಳು ನವದೆಹಲಿಯಲ್ಲಿ ‘ಪ್ರಜಾವಾಣಿ’ಗೆ ತಿಳಿಸಿವೆ.
‘ಮಧುಬನಿ ಮತ್ತು ಭಾಗಲ್ಪುರ ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ವಿಚಾರದಲ್ಲಿ ಆರ್‌ಜೆಡಿಯೊಂದಿಗಿನ ಮಾತುಕತೆ ಅಧಿಕೃತವಾಗಿ ಬಿದ್ದಿದೆ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ಎರಡೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು (ಎಐಸಿಸಿ ರಾಷ್ಟ್ರೀಯ ವಕ್ತಾರ ಶಕೀಲ್ ಅಹ್ಮದ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸದಾನಂದ್ ಸಿಂಗ್) ಕಣಕ್ಕಿಳಿಸಲು ಕಾಂಗ್ರೆಸ್ ಬಯಸಿತ್ತು. ಆದರೆ, ಈ ಎರಡೂ ಕ್ಷೇತ್ರಗಳನ್ನು ಆರ್‌ಜೆಡಿ ಬಯಸಿತ್ತು ಎಂದು ಹೆಸರು ಹೇಳಲಿಚ್ಛಿ-ಸದ ಎಐಸಿಸಿ ಮುಖಂಡರು ಹೇಳಿದ್ದಾರೆ.
ಉದ್ದೇಶಿತ, ಕಾಂಗ್ರೆಸ್–ಎಲ್‌ಜೆಪಿ–ಆರ್‌ಜೆಡಿ ಮೈತ್ರಿಯಿಂದ ಪಾಸ್ವಾನ್ ಅವರು ಹೊರನಡೆದಿದ್ದು ಸಹ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಪ್ರಸ್ತಾವ ಮುರಿದು ಬೀಳಲು ಕಾರಣ ಎಂದು ಹೇಳಲಾಗಿದೆ.
ವೇಗವಾಗಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಹಿಂಬಾಗಿಲ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಲುಪಲು ಯತ್ನಿಸುತ್ತಿದೆಯೇ ಎಂಬುದನ್ನು ಕಾಂಗ್ರೆಸ್ ಮೂಲಗಳು ದೃಢಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ.
ಕಾಂಗ್ರೆಸ್ 11, ಎನ್‌ಸಿಪಿ 1 ಕ್ಷೇತ್ರ: ಲಾಲು ಪ್ರಸ್ತಾವ
ಪಟ್ನಾ (ಪಿಟಿಐ): ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯುಪಿಎ ಅಂಗಪಕ್ಷಗಳ ಜೊತೆ ಕ್ಷೇತ್ರ ಹೊಂದಾಣಿಕೆಗೆ ಮುಂದಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್‌ಗೆ 11 ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಒಂದು ಕ್ಷೇತಗಳನ್ನು ಬಿಟ್ಟುಕೊಡುವ ಪ್ರಸ್ತಾವ ಮಾಡಿದೆ. ಆದರೆ, ಈ ಪ್ರಸ್ತಾವದ ಬಗ್ಗೆ ಕಾಂಗ್ರೆಸ್ ಅಸಮಾಧಾನಗೊಂಡಿದ್ದು, ಈ ಮೈತ್ರಿ ಅಸಾಧ್ಯವಾಗಬಹುದು ಎನ್ನಲಾಗಿದೆ.
ಪಕ್ಷದ ಸಂಸದೀಯ ಮಂಡಳಿ ಭಾನುವಾರ (ಮಾ. 2) ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ಅಷ್ಟರೊಳಗೆ ಈ ಪ್ರಸ್ತಾವದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಆ ಪಕ್ಷಗಳಿಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕೋರಿದ್ದಾರೆ.
‘ಹೋಳಿಗೂ ಮೊದಲೇ ಸಿದ್ಧಾಂತಕ್ಕೆ ಬೆಂಕಿ ಇಟ್ಟ ಎಲ್‌ಜೆಪಿ’: ಈ ಮಧ್ಯೆ, ಪಕ್ಷದ ಸಖ್ಯ ತೊರೆದು ಬಿಜೆಪಿ ಪಾಳೆಯಕ್ಕೆ ಹೋಗಿರುವ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ದ ಬಗ್ಗೆ ಲೇವಡಿ ಮಾಡಿರುವ ಲಾಲು ಪ್ರಸಾದ್, ‘ಆ ಪಕ್ಷ ತನ್ನ ಸಿದ್ಧಾಂತಕ್ಕೆ ಹೋಳಿ ಹಬ್ಬಕ್ಕೂ ಮುನ್ನವೇ ಬೆಂಕಿ ಇಟ್ಟುಬಿಟ್ಟಿದೆ. ಅವರು (ರಾಮ್ ವಿಲಾಸ್ ಪಾಸ್ವಾನ್) ಇಂತಹ ನಿರ್ಧಾರ ತೆಗೆದುಕೊಂಡಿದ್ದು ಏಕೆಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.