ADVERTISEMENT

ಕಾಂಗ್ರೆಸ್‌ ಸೂಕ್ತ ನಾಯಕರಿಲ್ಲದೆ ದಿವಾಳಿಯಾಗಿದೆ: ನರೇಂದ್ರ ಮೋದಿ

ಏಜೆನ್ಸೀಸ್
Published 4 ಡಿಸೆಂಬರ್ 2017, 14:16 IST
Last Updated 4 ಡಿಸೆಂಬರ್ 2017, 14:16 IST
ಕಾಂಗ್ರೆಸ್‌ ಸೂಕ್ತ ನಾಯಕರಿಲ್ಲದೆ ದಿವಾಳಿಯಾಗಿದೆ: ನರೇಂದ್ರ ಮೋದಿ
ಕಾಂಗ್ರೆಸ್‌ ಸೂಕ್ತ ನಾಯಕರಿಲ್ಲದೆ ದಿವಾಳಿಯಾಗಿದೆ: ನರೇಂದ್ರ ಮೋದಿ   

ಧರ್ಮಪುರ: ‘ಕಾಂಗ್ರೆಸ್‌ ಪಕ್ಷ ಸೂಕ್ತ ನಾಯಕರಿಲ್ಲದೆ ದಿವಾಳಿಯಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿಯನ್ನು ಆ ಪಕ್ಷ ಈಗ ತನ್ನ ಅಧ್ಯಕ್ಷನನ್ನಾಗಿ ಆರಿಸಲು ಹೊರಟಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ವಲ್ಸಾದ್ ಜಿಲ್ಲೆಯ ಧರ್ಮಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷದ ಬಗ್ಗೆ ವ್ಯಂಗ್ಯವಾಡಿದ್ದಾರೆ.

‘ನಾನು ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ಔರಂಗಜೇಬ್‌ ರಾಜನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಜನರ ಸುರಕ್ಷತೆಯ ವಿಚಾರ. ನಮ್ಮ ಹೈ ಕಮಾಂಡ್ 125 ಕೋಟಿ ಭಾರತೀಯರ ರಕ್ಷಣೆಗೆ ಬದ್ಧವಾಗಿದೆ’ ಎಂದಿದ್ದಾರೆ.

ADVERTISEMENT

‘ಕಾಂಗ್ರೆಸ್‌ ಒಂದು ಪಕ್ಷವಲ್ಲ; ಅದು ಒಂದು ಕುಟುಂಬ ಎಂದು ಆ ಪಕ್ಷದ ಮುಖಂಡರೇ ಒಪ್ಪಿಕೊಂಡಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

‘ಒಂದು ಕುಟುಂಬಕ್ಕೆ ತನ್ನ ನಿಷ್ಠೆ ತೋರಿಸುವುದಕ್ಕೆ ಲಜ್ಜೆ ಪಡದ ಮಣಿಶಂಕರ್‌ ಅಯ್ಯರ್‌ ತಮ್ಮ ಮಾತಿನಲ್ಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ‘ಜಹಾಂಗೀರ್‌ ಸ್ಥಾನಕ್ಕೆ ಷಹಜಹಾನ್‌ ಬಂದಾಗ ಯಾವುದೇ ಚುನಾವಣೆ ನಡೆದಿತ್ತೇ? ಷಹಜಹಾನ್‌ ಸ್ಥಾನಕ್ಕೆ ಔರಂಗಜೇಬ್‌ ಬಂದಾಗ ಯಾವ ಚುನಾವಣೆ ನಡೆದಿತ್ತು? ಅಧಿಕಾರ ರಾಜನ ಮಗನಿಗೇ ಬರುವುದು ಎಲ್ಲರಿಗೂ ಗೊತ್ತಿರುವಂಥದ್ದೇ’ ಎಂದು ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್‌ ಒಂದು ಕುಟುಂಬಕ್ಕೆ ಸೇರಿದ ಪಕ್ಷ ಎಂದು ಆ ಪಕ್ಷದ ಮುಖಂಡರೇ ಒಪ್ಪಿಕೊಂಡಂತಾಗಿದೆ. ಆದರೆ, ನಮಗೆ ಔರಂಗಜೇಬ್‌ ಆಡಳಿತ ಬೇಕಿಲ್ಲ’ ಎಂದು ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.