ADVERTISEMENT

ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಸಜ್ಜು

ಪಿಟಿಐ
Published 23 ಏಪ್ರಿಲ್ 2018, 19:57 IST
Last Updated 23 ಏಪ್ರಿಲ್ 2018, 19:57 IST
ವೆಂಕಯ್ಯ ನಾಯ್ಡು ಮತ್ತು ದೀಪಕ್‌ ಮಿಶ್ರಾ
ವೆಂಕಯ್ಯ ನಾಯ್ಡು ಮತ್ತು ದೀಪಕ್‌ ಮಿಶ್ರಾ   

ನವದೆಹಲಿ: ವಾಗ್ದಂಡನೆ ನಿಲುವಳಿ ತಿರಸ್ಕರಿಸಿರುವ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಕಾನೂನು ಹೋರಾಟ ನಡೆಸಲು ನಿರ್ಧರಿಸಿವೆ.

ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿರುವುದಾಗಿ ಕಾಂಗ್ರೆಸ್‌ ಸೋಮವಾರ ಸ್ಪಷ್ಟಪಡಿಸಿದೆ.

ನಾಯ್ಡು ಅವರ ಈ ನಿರ್ಧಾರ ಪ್ರಜಾಪ್ರಭುತ್ವವನ್ನು ‘ಉಳಿಸುವ’ ಮತ್ತು ‘ತಿರಸ್ಕರಿಸುವ’ ಎರಡು ಶಕ್ತಿಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ ಎಂದು ಕಾಂಗ್ರೆಸ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ADVERTISEMENT

‘ವಾಗ್ದಂಡನೆ ನಿಲುವಳಿ ನೋಟಿಸ್‌ ಅರ್ಹತೆ ತೀರ್ಮಾನಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಹಾಗೂ ಜನಾದೇಶ ರಾಜ್ಯಸಭೆಯ ಸಭಾಪತಿಗೆ ಇಲ್ಲ’ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಆಕ್ಷೇಪ ಎತ್ತಿದ್ದಾರೆ.

ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ  ಮಾಡಲಾಗಿರುವ ಆರೋಪಗಳನ್ನು ತನಿಖೆ ಮೂಲಕ ಪರಿಶೀಲಿಸಬೇಕು ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಒತ್ತಾಯಿಸಿದ್ದಾರೆ.

ಈ ಕುರಿತು ತನಿಖೆಗೆ ಅವಕಾಶ ನೀಡುವುದು ಸರ್ಕಾರಕ್ಕೆ ಬೇಕಿಲ್ಲ. ಹೀಗಾಗಿ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ನಾಯ್ಡು ಈ ನಿರ್ಧಾರದ ಹಿಂದೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಪ್ರಭಾವ ಕೆಲಸ ಮಾಡಿದೆ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.

ತರಾತುರಿಯಲ್ಲಿ ಕೈಗೊಂಡ ಆತುರದ ಮತ್ತು ಅಸಂವಿಧಾನಿಕ ನಿರ್ಧಾರ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.
**
ನಾಯ್ಡು ನೀಡಿದ ಕಾರಣಗಳು

* ಮುಖ್ಯ ನ್ಯಾಯಮೂರ್ತಿಯ ವಾಗ್ದಂಡನೆಗೆ ವಿರೋಧ ಪಕ್ಷಗಳು ನೀಡಿದ ಕಾರಣಗಳು ಕೇವಲ ಕಾಲ್ಪನಿಕ ಎಂಬುವುದು ತಜ್ಞರ ಜತೆಗಿನ ಸಮಾಲೋಚನೆಯಿಂದ ಮನವರಿಕೆಯಾಗಿದೆ. ಹೀಗಾಗಿ ವಾಗ್ದಂಡನೆ ನಿಲುವಳಿ ನೋಟಿಸ್‌ ಸ್ವೀಕಾರಕ್ಕೆ ಅರ್ಹವಲ್ಲ

ಮುಖ್ಯ ನ್ಯಾಯಮೂರ್ತಿ ಮಿಶ್ರಾ ವಿರುದ್ಧ ವಿರೋಧ ಪಕ್ಷಗಳು ಮಾಡಿದ ಎಲ್ಲ ಐದು ಆರೋಪಗಳ ಬಗ್ಗೆ ಕೂಲಂಕಷ ಪರಾಮರ್ಶೆ ನಡೆಸಿ, ದಾಖಲೆ ಪರಿಶೀಲಿಸಿದ ನಂತರ ಈ ನಿರ್ಧಾರ

* ಕೇವಲ ಊಹಾತ್ಮಕ ಆರೋಪಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಲ್ಲಿ ಅದು ಬೇಜವಾಬ್ದಾರಿ ಮತ್ತು ಅಸಮರ್ಪಕ ತೀರ್ಮಾನವಾಗುತ್ತದೆ

* ವಾಗ್ದಂಡನೆ ನಿಲುವಳಿ ನೋಟಿಸ್‌ ಸಲ್ಲಿಸಿದ ನಂತರ ಕಾಂಗ್ರೆಸ್‌ ನೋಟಿಸ್‌ನಲ್ಲಿರುವ ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಚರ್ಚಿಸಿದ್ದು ತಪ್ಪು

* ರಾಜ್ಯಸಭಾ ಸದಸ್ಯರ ನಡವಳಿಕೆ ಕುರಿತು ಕೈಪಿಡಿಯಲ್ಲಿ ನಮೂದಿಸಲಾದ ನಿಯಮಾವಳಿ ಅನ್ವಯ ಇದು ಸಂಸದೀಯ ನಡವಳಿಕೆ ಮತ್ತು ರಾಜ್ಯಸಭಾ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ

* ಸಿಜೆಐ ವಿರುದ್ಧ ವಿರೋಧ ಪಕ್ಷಗಳ ಮಾಡಿರುವ ಆರೋಪಗಳು ಪ್ರಜಾಪ್ರಭುತ್ವದ ಬುನಾದಿಯಾದ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ಕಾಣುತ್ತವೆ.

* ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ಘನತೆ, ಗೌರವಕ್ಕೆ ಚ್ಯುತಿ ತರುವ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವದ ಅಂಗಗಳ ಮೇಲೆ ಜನಸಾಮಾನ್ಯರು ಇಟ್ಟಿರುವ ವಿಶ್ವಾಸ ಕುಸಿಯಲು ಬಿಡುವುದಿಲ್ಲ
**
ವಿರೋಧ ಪಕ್ಷಗಳ ಬಳಿ ಬಲವಾದ ಕಾರಣ ಮತ್ತು ಸಾಕ್ಷ್ಯ ಇರಲಿಲ್ಲ. ಸಿಜೆಐಗೆ ವಾಗ್ದಂಡನೆ ನೀಡಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ನೋಟಿಸ್ ನೀಡಿದ್ದು ಸರಿಯಾದ ನಿರ್ಧಾರವಲ್ಲ.
ಆರ್‌.ಎಸ್‌. ಸೋಧಿ, ನಿವೃತ್ತ ನ್ಯಾಯಮೂರ್ತಿ
**
ವಾಗ್ದಂಡನೆ ನಿಲುವಳಿ ನೋಟಿಸನ್ನು ಕೂಲಂಕಷವಾಗ ಪರಿಶೀಲಿಸಿಯೇ ವೆಂಕಯ್ಯ ನಾಯ್ಡು ಅದನ್ನು ತಿರಸ್ಕರಿಸಿರುತ್ತಾರೆ. ಹೀಗಾಗಿ ವಿರೋಧ ಪಕ್ಷಗಳು ರಿಟ್ ಅರ್ಜಿ ಸಲ್ಲಿಸಿದರೂ ಉಪಯೋಗವಿಲ್ಲ.
ಸೋಲಿ ಸೊರಬ್ಜಿ, ಮಾಜಿ ಅಟಾರ್ನಿ ಜನರಲ್
**
ನಮ್ಮ ನೋಟಿಸನ್ನು ವೆಂಕಯ್ಯ ನಾಯ್ಡು ತಿರಸ್ಕರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಅವರ ಈ ನಿರ್ಧಾರವನ್ನು ಪ್ರಶ್ನಿಸಲು ನಮ್ಮ ಬಳಿ ಪ್ರಜಾಸತ್ತಾತ್ಮಕವಾದ ಹಲವು ಮಾರ್ಗಗಳಿವೆ.
ತೆಹ್ಸೀನ್ ಪೂನಾವಾಲಾ, ಕಾಂಗ್ರೆಸ್ ನಾಯಕ
**
ನಾಯ್ಡು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಎರಡು ದಿನ ಬೇಕಿರಲಿಲ್ಲ. ಮೊದಲ ದಿನವೇ ಅದನ್ನು ತೆಗೆದು ಹೊರಗೆ ಎಸಯಬೇಕಿತ್ತು
ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.