ADVERTISEMENT

ಕಾಯಂ ಸದಸ್ಯತ್ವ: ಚೀನಾ ಕ್ಯಾತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 7:05 IST
Last Updated 17 ಡಿಸೆಂಬರ್ 2010, 7:05 IST

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತ ಇನ್ನಷ್ಟು ಪರಿಣಾಮಕಾರಿ ಪಾತ್ರ ವಹಿಸಬೇಕೆಂಬುದನ್ನು ಚೀನಾ ಗುರುವಾರ ಬೆಂಬಲಿಸಿದೆಯಾದರೂ, ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕೆಂಬ ಭಾರತದ ಆಗ್ರಹವನ್ನು ಬೆಂಬಲಿಸುವ ಬಗ್ಗೆ ಸ್ಪಷ್ಟ ಘೋಷಣೆಯನ್ನು ಪ್ರಕಟಿಸಲಿಲ್ಲ.

ಎರಡೂ ರಾಷ್ಟ್ರಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಆರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದರೂ ತಮ್ಮ ನಡುವೆ ಹೊಗೆಯಾಡುತ್ತಿರುವ ಕೆಲವು ವಿವಾದಾತ್ಮಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರದ ಪ್ರಜೆಗಳಿಗೆ ಸ್ಥಳದಲ್ಲೇ ವೀಸಾ ನೀಡುವ ಪ್ರತ್ಯೇಕ ಪದ್ಧತಿ ಅನುಸರಿಸುತ್ತಿರುವ(ಸ್ಟ್ಯಾಪಲ್ಡ್ ವೀಸಾ) ಚೀನಾ ಧೋರಣೆ ಬಗ್ಗೆ ಭಾರತ ತೀವ್ರ ಅತೃಪ್ತಿ ಹೊಂದಿದ್ದು, ಗುರುವಾರ ಆ ನಿಟ್ಟಿನಲ್ಲಿ ಯಾವ ಪ್ರಗತಿಯೂ ಆಗಲಿಲ್ಲ.

‘ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ’ ಎಂಬ ತನ್ನ ನಿಲುವನ್ನು ಚೀನಾ ಪ್ರತ್ಯೇಕ ವೀಸಾ ನೀಡಿಕೆ ಪದ್ಧತಿ ಅನುಸರಿಸುವ ಮೂಲಕ ಪ್ರದರ್ಶಿಸುತ್ತಿದೆ ಎಂಬುದು ಭಾರತದ ಆಪಾದನೆ. ಆದ್ದರಿಂದ ಭಾರತ ಕೂಡ ‘ಸೇರಿಗೆ ಸವ್ವಾಸೇರು’ ಎಂಬಂತೆ ಟಿಬೆಟ್ ಮತ್ತು ತೈವಾನ್‌ಗಳಿಗೆ ಸಂಬಂಧಿಸಿದಂತೆ ಚೀನಾದ ಧೋರಣೆಯನ್ನು ಬೆಂಬಲಿಸಿ ಯಾವ ಹೇಳಿಕೆಯನ್ನೂ ನೀಡಿಲ್ಲ.

ADVERTISEMENT

ಈ ಮಧ್ಯೆ, ಗಡಿ ವಿವಾದ ಕುರಿತ ಮಾತುಕತೆಗೆ ಪೂರಕ ವ್ಯವಸ್ಥೆ ರೂಪಿಸಿಕೊಳ್ಳಲು ಎರಡೂ ರಾಷ್ಟ್ರಗಳ ಮಧ್ಯೆ ಸಹಮತ ಇದೆ ಎಂದು ಚೀನಾ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.