ADVERTISEMENT

ಕಾಸಿಗಾಗಿ ಸುದ್ದಿ ವಿಚಾರಣಾರ್ಹ: ಖುರೇಷಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 19:30 IST
Last Updated 10 ಜೂನ್ 2012, 19:30 IST
ಕಾಸಿಗಾಗಿ ಸುದ್ದಿ ವಿಚಾರಣಾರ್ಹ: ಖುರೇಷಿ
ಕಾಸಿಗಾಗಿ ಸುದ್ದಿ ವಿಚಾರಣಾರ್ಹ: ಖುರೇಷಿ   

ನವದೆಹಲಿ (ಪಿಟಿಐ): ಸಂತಸ ಮತ್ತು ಸಾಧನೆಯ ನಿಟ್ಟುಸಿರುವಿನೊಂದಿಗೆ ಭಾನುವಾರ ಸೇವೆಯಿಂದ ನಿವೃತ್ತರಾದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್.ವೈ. ಖುರೇಷಿ, `ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ದೊಡ್ಡ ಬೆದರಿಕೆಯಾಗಿ ಹೊರಹೊಮ್ಮಿರುವ `ಕಾಸಿಗಾಗಿ ಸುದ್ದಿ~ ಹಗರಣವನ್ನು ವಿಚಾರಣಾರ್ಹ ಅಪರಾಧವಾಗಿ ಆಯೋಗ ಪರಿಗಣಿಸಲಿದೆ~ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಯೋಗದಲ್ಲಿ ಸುಮಾರು ಆರು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ `ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ನೆನೆಗುದಿಯಲ್ಲಿರುವ ಕೆಲವು ಪ್ರಮುಖ ಚುನಾವಣಾ ಸುಧಾರಣೆಗಳು ಶೀಘ್ರವೇ ಜಾರಿಗೊಳ್ಳಲಿವೆ~ ಎಂಬ ಭರವಸೆಯನ್ನೂ ಸೂಚಿಸಿದ್ದಾರೆ.

“ಚುನಾವಣಾ ಸುಧಾರಣೆಯಲ್ಲಿ `ಕಾಸಿಗಾಗಿ ಸುದ್ದಿ~ ಹಗರಣವನ್ನು ವಿಚಾರಣಾರ್ಹ ಅಪರಾಧವೆಂದು ಪರಿಗಣಿಸಿ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಒಂದೊಮ್ಮೆ ಚುನಾವಣಾ ಸುಧಾರಣೆಯ ಪ್ರಸ್ತಾವಗಳು ಜಾರಿಗೆ ಬಂದಲ್ಲಿ, ಅದು ಮಹತ್ವದ ಹೆಜ್ಜೆಯಾಗಲಿದೆ” ಎಂದು ಅವರು ಹೇಳಿದ್ದಾರೆ. ಚುನಾವಣಾ ನೀತಿ-ಸಂಹಿತೆಗೆ ಕಾನೂನುಬದ್ಧ ಅಧಿಕಾರ ನೀಡಬೇಕೆಂಬ ಸಲಹೆಯನ್ನು ತಿರಸ್ಕರಿಸಿದ ಅವರು, ಇದರಿಂದ ಹಾಲಿ ವ್ಯವಸ್ಥೆಯನ್ನು ಹದಗೆಡಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯ ಪ್ರಕಟವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, `ಚುನಾವಣಾ ಆಯುಕ್ತರ ನೇಮಕಾತಿಗೂ ಮುನ್ನ ತೀವ್ರ ಸಮಾಲೋಚನೆ ನಡೆಸಬೇಕೇ ಹೊರತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕಲ್ಲ~ ಎಂದರು. 

 `ವಿಸ್ತೃತ ಆಯ್ಕೆಯ ಮೂಲಕ ಆಯುಕ್ತರ ನೇಮಕಾತಿ ಆಗಬೇಕಿದ್ದು, ಇವರಲ್ಲಿ ಹಿರಿಯರೊಬ್ಬರು ಮುಖ್ಯ ಆಯುಕ್ತರಾಗುತ್ತಾರೆ ಅಷ್ಟೆ~ ಎಂದೂ ಅವರು ಉತ್ತರಿಸಿದರು.

ಹೊಸ ಸಿಇಸಿ

ನವದೆಹಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಕಗೊಂಡಿರುವ ವೀರವಲ್ಲಿ ಸುಂದರಂ ಸಂಪತ್ ಅವರು ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.

1973ರ ಬ್ಯಾಚ್‌ನ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಸಂಪತ್ ನೇಮಕಾತಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕಳೆದ ಬುಧವಾರ ಅಂಕಿತ ಹಾಕಿದ್ದರು. ದೇಶದ 18ನೇ ಮುಖ್ಯಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿರುವ ಸಂಪತ್ ಅವರು 2015ರ ಜನವರಿಯವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ವಿಶೇಷ ನೇಮಕಾತಿ ಸಮಿತಿ ರಚಿಸಬೇಕು ಎಂಬ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಸಲಹೆಯನ್ನು ಕಡೆಗಣಿಸಿ ಸಂಪತ್ ಅವರನ್ನು ನೇಮಕ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.