ನವದೆಹಲಿ: ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಹಿರಿಯ ವಕೀಲ ಎಫ್.ಎಸ್. ನಾರಿಮನ್ ನೇತೃತ್ವದ ವಕೀಲರ ನಿಯೋಗ ಸ್ಪಷ್ಟವಾಗಿ ನಿರಾಕರಿಸಿದೆ. ಇದರಿಂದಾಗಿ ಸರ್ವಪಕ್ಷಗಳ ಸಭೆಯ ನಿರ್ಣಯಕ್ಕೆ ಹಿನ್ನಡೆಯಾದಂತಾಗಿದೆ.
ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬೇಕೆಂಬ ಸರ್ವಪಕ್ಷಗಳ ಸಭೆಯ ನಿರ್ಣಯ ಕುರಿತು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ನಿಯೋಗ ಸೋಮವಾರ ನಾರಿಮನ್ ಮತ್ತು ಅವರ ಸಹೊದ್ಯೋಗಿ ವಕೀಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಹಿರಿಯ ವಕೀಲರು ತಮ್ಮ ನಿಲುವನ್ನು ಖಚಿತಪಡಿಸಿದರು.
ಕೃಷ್ಣಾ ನೀರು ಹಂಚಿಕೆ ವಿವಾದ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಶ್ನೆ ಮಾಡುವುದಕ್ಕಾಗಲೀ ಅಥವಾ ತೀರ್ಪಿನ ಕೆಲವು ಅಂಶಗಳನ್ನು ಕುರಿತು ಸ್ಪಷ್ಟನೆ ಕೇಳಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸುವುದಕ್ಕಾಗಲೀ ನಾರಿಮನ್ ಒಲವು ತೋರಲಿಲ್ಲ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕು ಎಂಬುದು ಸರ್ವಪಕ್ಷಗಳ ಸಭೆಯ ನಿರ್ಣಯ. ಈ ನಿರ್ಧಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಆಂಧ್ರ ಪ್ರದೇಶ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಈಗಾಗಲೇ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ನಾವೂ ಪ್ರಶ್ನೆ ಮಾಡಬೇಕಾಗಿದೆ’ ಎಂದು ಮುಖ್ಯಮಂತ್ರಿ ವಿವರಿಸಿದರು.
ಯಡಿಯೂರಪ್ಪ ಅವರ ಮಾತು ಆಲಿಸಿದ ನಾರಿಮನ್, ‘ಯಾರಾದರೂ ಹೋಗಲಿ. ನೀವೂ ಬೇಕಾದರೆ ಹೋಗಿ. ನಾನಂತೂ ರಾಜ್ಯದ ಪರ ಹಾಜರಾಗುವುದಿಲ್ಲ. ಬೇರೆ ವಕೀಲರನ್ನು ನೇಮಕ ಮಾಡಿಕೊಳ್ಳಿ’ ಎಂದು ನೇರವಾಗಿಯೇ ಹೇಳಿದರು.
‘ಸುಪ್ರೀಂ ಕೋರ್ಟ್ ಮೊರೆ ಹೋಗುವುದು ರಾಜಕೀಯ ಅನಿವಾರ್ಯ. ಈ ತೀರ್ಮಾನದಲ್ಲಿ ವಿರೋಧ ಪಕ್ಷಗಳು ಭಾಗಿಯಾಗಿವೆ’ ಎಂದು ಮುಖ್ಯಮಂತ್ರಿ ವಿವರಿಸಿದರು. ‘ವಿರೋಧ ಪಕ್ಷಗಳ ಮುಖಂಡರನ್ನು ಬೇಕಾದರೆ ಕರೆದುಕೊಂಡು ಬನ್ನಿ ಅವರಿಗೂ ನ್ಯಾಯಮಂಡಳಿ ತೀರ್ಪನ್ನು ವಿವರಿಸಿ ಹೇಳುತ್ತೇನೆ’ ಎಂದು ನಾರಿಮನ್ ಹೇಳಿದರು.
‘ನಿಮ್ಮ ಸಲಹೆಯನ್ನು ಸರ್ವ ಪಕ್ಷಗಳ ಮುಂದಿಡುತ್ತೇನೆ. ರಾಜಕೀಯ ಮುಖಂಡರು ಇದಕ್ಕೆ ಒಪ್ಪದಿದ್ದರೆ ನಿಮ್ಮ ಬಳಿ ಕರೆತರುತ್ತೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ತಿಂಗಳ 26ರಂದು ಸರ್ವಪಕ್ಷಗಳ ನಾಯಕರ ಜತೆ ಮತ್ತೆ ದೆಹಲಿಗೆ ಧಾವಿಸಿ ನಾರಿಮನ್ ಜತೆ ಮಾತುಕತೆ ನಡೆಸುವ ಸಂಭವವಿದೆ.
‘ನ್ಯಾಯಮಂಡಳಿ ತೀರ್ಪಿನ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ಗೆ ಇರುವುದು ಸೀಮಿತ ಅವಕಾಶ. ವ್ಯಾಜ್ಯದಲ್ಲಿ ಭಾಗಿಯಾದ ಯಾವುದೇ ರಾಜ್ಯ ತೀರ್ಪು ಪರಿಶೀಲಿಸುವಂತೆ ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಷ್ಟೇ. ಇಡೀ ತೀರ್ಪನ್ನು ಪ್ರಶ್ನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಏಕೆಂದರೆ ಸಂವಿಧಾನದ 262ನೇ ಕಲಂ ಪ್ರಕಾರ ನ್ಯಾಯಮಂಡಳಿ ತೀರ್ಪು ಅಂತಿಮ’ ಎಂಬುದು ಮೂಲಗಳ ಪ್ರತಿಪಾದನೆ.
ಮುಖ್ಯಮಂತ್ರಿ ನೇತೃತ್ವದ ನಿಯೋಗದಲ್ಲಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಇದ್ದರು. ನಾರಿಮನ್ ಜತೆ ವಕೀಲರಾದ ಜವಳಿ ಮತ್ತು ಮೋಹನ್ ಕಾತರಕಿ ಇದ್ದರು. ಚರ್ಚೆಯ ವೇಳೆ ಕೃಷ್ಣಾ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ಅನುಕೂಲಗಳನ್ನು ಮನವರಿಕೆ ಮಾಡಿಕೊಡಲು ನಾರಿಮನ್ ಪ್ರಯತ್ನ ಮಾಡಿದರು. ‘ನಾವು ಬೇಡಿಕೆ ಇಟ್ಟಿದ್ದು 1,112 ಟಿಎಂಸಿ ಅಡಿ. ನಮಗೆ ಸಿಕ್ಕಿರುವುದು 911 ಟಿಎಂಸಿ. 101 ಟಿಎಂಸಿ ಕಡಿಮೆಯಾಗಿದೆ ಅಷ್ಟೇ’ ಎಂದು ವಿವರಿಸಿದರು.
ಆದರೆ, ನ್ಯಾಯಮಂಡಳಿ ಯಾವ ರಾಜ್ಯಕ್ಕೂ ಹಂಚಿಕೆ ಮಾಡದ ನೀರು 416 ಟಿಎಂಸಿ ಅಡಿ ಇದೆ. ಇದನ್ನು ಹಂಚಿಕೆ ಮಾಡುವಂತೆ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂಬ ಅಂಶವನ್ನು ನಾರಿಮನ್ ಗಮನಕ್ಕೆ ಮೋಹನ್ ಕಾತರಕಿ ತಂದರು. ಅದಕ್ಕೆ ಅವರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಮಾಡಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಈ ನೀರಿನಲ್ಲಿ 208 ಟಿಎಂಸಿ ಕೇಳಲು ಅವಕಾಶವಿದೆ. ಕಡೇ ಪಕ್ಷ ಶೇ.25ರಷ್ಟು ಸಿಕ್ಕರೂ 104 ಟಿಎಂಸಿ ಆಗಲಿದೆ ಎಂಬ ಅಭಿಪ್ರಾಯವನ್ನು ಮೂಲಗಳು ವ್ಯಕ್ತಪಡಿಸಿವೆ. ನ್ಯಾ.ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯ ಮಂಡಳಿ ಡಿಸೆಂಬರ್ 30ರಂದು ತೀರ್ಪು ನೀಡಿದೆ. ಈ ತೀರ್ಪಿಗೆ ಮಾರ್ಚ್ ಅಂತ್ಯದವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.