ADVERTISEMENT

ಕೇಂದ್ರಕ್ಕೆ ಕಲ್ಲಿದ್ದಲ ಮಸಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ಕೇಂದ್ರಕ್ಕೆ ಕಲ್ಲಿದ್ದಲ ಮಸಿ
ಕೇಂದ್ರಕ್ಕೆ ಕಲ್ಲಿದ್ದಲ ಮಸಿ   

ನವದೆಹಲಿ (ಪಿಟಿಐ): ಹಗರಣಗಳ ಭಾರದಿಂದ ತತ್ತರಿಸಿರುವ `ಯುಪಿಎ~ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡುವಂತೆ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದ ಬೊಕ್ಕಸಕ್ಕೆ ರೂ. 3.06 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಬಹುದೊಡ್ಡ ಹಗರಣ, `ಹಗರಣಗಳ ತಾಯಿ~ ಎಂದೂ ಕರೆಸಿಕೊಳ್ಳಲಾದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಕುರಿತಾಗಿ ಬಹುನಿರೀಕ್ಷಿತ `ಸಿಎಜಿ~ ವರದಿಯನ್ನು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಯಿತು.

ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದರಿಂದ ದೇಶದ ಬೊಕ್ಕಸಕ್ಕೆ ರೂ.1.86 ಲಕ್ಷ ಕೋಟಿ ಗಳಷ್ಟು ನಷ್ಟವಾಗಿದೆ. ಸರ್ಕಾರ ಹೇಳಿಕೊಳ್ಳುವಂತೆ ನಿಕ್ಷೇಪ ಹಂಚಿಕೆ ಮಾಡುವಾಗ ಯಾವುದೇ ಪಾರದರ್ಶಕ ನೀತಿ ಅನುಸರಿಸಿರುವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ.

ಇದರ ಜತೆ ದೆಹಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ನೀಡಿರುವುದರಿಂದ ರೂ.88,337 ಕೋಟಿ ಹಾಗೂ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಪವರ್ ಕಂಪೆನಿಗೆ ಹೆಚ್ಚುವರಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿರುವುದರಿಂದ ರೂ. 29,033 ಕೋಟಿ  ನಷ್ಟವಾಗಿದೆ ಎಂದೂ ವರದಿಯಲ್ಲಿ ಸರ್ಕಾರಕ್ಕೆ ಚಾಟಿ ಏಟು ಬೀಸಲಾಗಿದೆ.

ಸರ್ಕಾರ 2004ರಲ್ಲಿ ನಿರ್ಧರಿಸಿದಂತೆ ಕಲ್ಲಿದ್ದಲು ನಿಕ್ಷೇಪಗಳ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಗೆ ಮೊದಲೇ ಚಾಲನೆ ನೀಡಿದ್ದಲ್ಲಿ ಬೊಕ್ಕಸಕ್ಕೆ ಆಗಿರುವ ಕೋಟ್ಯಂತರ ಮೊತ್ತದ ನಷ್ಟವನ್ನು ತಡೆಯಬಹುದಾಗಿತ್ತು ಎಂದೂ ಈ ವರದಿ ಅಭಿಪ್ರಾಯ ಪಟ್ಟಿದೆ.

ಸ್ಪರ್ಧಾತ್ಮಕ ಹರಾಜಿನ ಬದಲಾಗಿ, ಅರ್ಜಿ ಸಲ್ಲಿಸಿದ ಕಂಪನಿಗಳಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿದ್ದರಿಂದಾಗಿ ಎಸ್ಸಾರ್ ಪವರ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಪವರ್ ಹಾಗೂ ಜಿಂದಾಲ್ ಸ್ಟೀಲ್ ಮತ್ತು ಪವರ್, ಆರ್ಸೆಲರ್ ಮಿತ್ತಲ್, ಅದಾನಿ ಸೇರಿದಂತೆ 25 ಕಂಪನಿಗಳಿಗೆ ಭಾರಿ ಲಾಭವಾಗಿದೆ.

2010-11ನೇ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ `ಕೋಲ್ ಇಂಡಿಯಾ~ ಕಂಪನಿಯ ಸರಾಸರಿ ಕಲ್ಲಿದ್ದಲು ಉತ್ಪಾದನಾ ವೆಚ್ಚ ಹಾಗೂ ಸರಾಸರಿ ವರಮಾನ ಆಧಾರವಾಗಿಟ್ಟುಕೊಂಡು ದೇಶದ ಬೊಕ್ಕಸಕ್ಕೆ ಆದ ಹಾನಿಯನ್ನು ಅಂದಾಜು ಮಾಡಲಾಗಿದೆ.

ಆದರೆ, 2004ರಿಂದ 2009ರವರೆಗೆ ಕಲ್ಲಿದ್ದಲು ಸಚಿವರೂ ಆಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಈ ಅವಧಿಯಲ್ಲಿ 194 ಖಾಸಗಿ ಕಂಪನಿಗಳಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಲಾಗಿತ್ತು.

ದೆಹಲಿ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ `ಡಿಐಎಎಲ್~ ಕಂಪನಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕೇವಲ ರೂ.2,450 ಕೋಟಿ   ಹೂಡಿಕೆ ಮಾಡಿರುವಾಗ, ಅದಕ್ಕೆ ರೂ.1,63,557 ಕೋಟಿ ರೂಪಾಯಿ ವರಮಾನ ಗಳಿಸುವ ಸಾಮರ್ಥ್ಯ ಹೊಂದಿರುವ ದೆಹಲಿ ವಿಮಾನ ನಿಲ್ದಾಣ ಮತ್ತು ಅದರ ಭೂಮಿಯನ್ನು ಗುತ್ತಿಗೆಗೆ ನೀಡಿರುವುದರ ಉದ್ದೇಶ ಏನು ಎಂದೂ ವರದಿಯಲ್ಲಿ ಪ್ರಶ್ನಿಸಲಾಗಿದೆ.

ವಿಮಾನ ಪ್ರಯಾಣಿಕರ ಮೇಲೆ ಅಭಿವೃದ್ಧಿ ಶುಲ್ಕ ವಿಧಿಸಿ, ಹರಾಜು ನಿಯಮ ಉಲ್ಲಂಘಿಸಿ `ಡಿಐಎಎಲ್~ಗೆ ್ಙ 3,415 ಕೋಟಿ ಲಾಭ ಮಾಡಿಕೊಟ್ಟಿದ್ದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯವನ್ನು ಸಹ `ಸಿಎಜಿ~ ತರಾಟೆಗೆ ತೆಗೆದುಕೊಂಡಿದೆ. 

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಪವರ್ ಕಂಪನಿಯು ಮಧ್ಯಪ್ರದೇಶದ ಸಸಾನ್‌ನಲ್ಲಿ ನಡೆಸುತ್ತಿರುವ ವಿದ್ಯುತ್ ಸ್ಥಾವರಕ್ಕಾಗಿ ನೀಡಲಾದ ಕಲ್ಲಿದ್ದಲು ಗಣಿಗಳಿಂದ ಹೆಚ್ಚುವರಿ ಕಲ್ಲಿದ್ದಲ್ಲನ್ನು ಬೇರೆಡೆ ವರ್ಗಾಯಿಸಿದ್ದು, ಇದರಿಂದಾಗಿ 29 ಸಾವಿರ ಕೋಟಿ  ಲಾಭ ಮಾಡಿಕೊಂಡಿದೆ.

ಈ ಯೋಜನೆಗಾಗಿ ಅದೇ ಕಂಪೆನಿಗೆ ಮೂರನೇ ಕಲ್ಲಿದ್ದಲು ಗಣಿ ಗುತ್ತಿಗೆಗೆ ನೀಡಿರುವ ನಿರ್ಧಾರವನ್ನು ಸರ್ಕಾರ ಪುನರ್‌ಪರಿಶೀಲಿಸಬೇಕು. ಅಲ್ಲದೇ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಕೈಯಿಂದ ಕಲ್ಲಿದ್ದಲು ಗಣಿ ತಪ್ಪಿಸಿ ಅದನ್ನು ರಿಲಯನ್ಸ್ ಪವರ್‌ಗೆ ನೀಡಿರುವುದರ ಔಚಿತ್ಯ ಏನು ಎಂದು ಪ್ರಶ್ನಿಸಲಾಗಿದೆ.

ಸರ್ಕಾರದ ಸಮರ್ಥನೆ: `ಸಿಎಜಿ~ ವರದಿಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಪಾರದರ್ಶಕ ನೀತಿ ಅನುಸರಿಸಲಾಗಿದೆ ಎಂದು ಹೇಳಿದೆ.

ನಿಕ್ಷೇಪ ಹಂಚಿಕೆ ನೀತಿಯಲ್ಲಿ ಯಾವುದೇ ತಪ್ಪಿಲ್ಲ. ಹರಾಜು ಪ್ರಕ್ರಿಯೆ ಜಾರಿಯಲ್ಲಿ ಇಲ್ಲದ ಕಾರಣ ಇದಕ್ಕಿಂತ ಹೆಚ್ಚಿನ ಪಾರದರ್ಶಕ ನೀತಿ ಇರಲು ಸಾಧ್ಯವಿಲ್ಲ ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಹೇಳಿದ್ದಾರೆ.

`ಹೆಚ್ಚುತ್ತಿರುವ ಇಂಧನದ ಬೇಡಿಕೆ ಪೂರೈಸಲು ಸರ್ಕಾರಿ ಸ್ವಾಮ್ಯದ `ಕೋಲ್ ಇಂಡಿಯಾ~ಕ್ಕೆ ಸಾಧ್ಯವಾಗದ ಕಾರಣ, ಕಲ್ಲಿದ್ದಲು ನಿಕ್ಷೇಪಗಳ ಅಭಿವೃದ್ಧಿಯಲ್ಲಿ ಖಾಸಗಿ ಕಂಪನಿಗಳನ್ನು ಭಾಗಿಯಾಗಿಸಲಾಗಿದೆ.ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡಲಾದ 57 ನಿಕ್ಷೇಪಗಳ ಪೈಕಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ.~

`ಟಾಟಾ ಮತ್ತು ಜಿಂದಾಲ್ ಕಂಪನಿಗಳಿಗೆ ಕಲ್ಲಿದ್ದಲಿನಿಂದ ದ್ರವ ಇಂಧನ ಉತ್ಪಾದಿಸುವ ಯೋಜನೆಗಾಗಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಲಾಗಿದ್ದು, ದೇಶದ ಕಚ್ಚಾ ತೈಲ ಆಮದು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ~ ಎಂದೂ ಜೈಸ್ವಾಲ್ ಹೇಳಿದ್ದಾರೆ.

ರಾಜೀನಾಮೆಗೆ ಆಗ್ರಹ: ಯುಪಿಎ ಅವಧಿಯಲ್ಲಿ ನಡೆದ ಅತಿ ದೊಡ್ಡ ಹಗರಣ ಇದಾಗಿದೆ ಎಂದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಸಿಎಜಿ ವರದಿಯ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವ ಅಗತ್ಯವಿಲ್ಲ. ಪ್ರಧಾನಿ ರಾಜೀನಾಮೆ ನೀಡಿದರೆ ಸಾಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಅರುಣ್ ಜೇಟ್ಲಿ, ಕಲ್ಲಿದ್ದಲು ನಿಕ್ಷೇಪಗಳ ಗುತ್ತಿಗೆಯಿಂದ ಖಾಸಗಿ ಕಂಪೆನಿಗಳಿಗೆ ಆದ ಅನಿರೀಕ್ಷಿತ ಲಾಭಕ್ಕೆ ಪ್ರಧಾನಿ, `ನೇರವಾಗಿ, ನೈತಿಕವಾಗಿ, ರಾಜಕೀಯವಾಗಿ~ ಹೊಣೆಯಾಗುತ್ತಾರೆ ಎಂದು ಖಂಡಿಸಿದ್ದಾರೆ.

2ಜಿ ಹಗರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದರೆ, ಕಲ್ಲಿದ್ದಲು ಹಗರಣದಲ್ಲಿ ಸರ್ಕಾರದ ಬದಲಾಗಿ ಖಾಸಗಿ ಕಂಪನಿಗಳು ಲಕ್ಷ ಕೋಟಿಗಳಷ್ಟು ಲಾಭ ಮಾಡಿಕೊಂಡಿವೆ ಎಂದು ಜೇಟ್ಲಿ ಆರೋಪಿಸಿದ್ದಾರೆ. 2ಜಿ ಹಗರಣಕ್ಕೆ ಸಂಬಂಧಿಸಿದ `ಸಿಎಜಿ~ ವರದಿ ಸಮರ್ಪಕವಲ್ಲ ಎಂದು ಸರ್ಕಾರ ಆ ವರದಿಯನ್ನು ತಳ್ಳಿಹಾಕಿತ್ತು. ಆ ವರದಿಗೆ ಆದ ಗತಿಯೇ ಇದಕ್ಕೂ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ, `ಇದು ಕೇವಲ ಹಗರಣವಲ್ಲ, ಕೊಲೆ ಹಾಗೂ ಲೂಟಿ. ನಾವು ಪ್ರಧಾನಿ ಅವರಿಂದ ಉತ್ತರ ಬಯಸುತ್ತೇವೆ~ ಎಂದು ಕಟುವಾಗಿ ಹೇಳಿದ್ದಾರೆ. `ಯುಪಿಎ~ ಅದಕ್ಷ ಆಡಳಿತದಿಂದಾಗಿ ಕಪಾಟಿನಲ್ಲಿರುವ ಮತ್ತಷ್ಟು ಅಸ್ಥಿಪಂಜರಗಳ ಹೊರಬಂದಿವೆ ಎಂದು ಬಿಜೆಪಿಯ ರವಿ ಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ಪಾರದರ್ಶಕವಲ್ಲ ಏಕೆ?
ನವದೆಹಲಿ (ಪಿಟಿಐ):
ಯುಪಿಎ ಸರ್ಕಾರ ಹೇಳಿಕೊಂಡಂತೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪಾರದರ್ಶಕವಲ್ಲ ಏಕೆ ಎಂಬುದಕ್ಕೆ ಮಹಾಲೇಖಪಾಲರ ವರದಿಯಲ್ಲಿ ಕಾರಣ ನೀಡಲಾಗಿದೆ.

2004ರಿಂದ ಈವರೆಗೆ ಅರ್ಜಿದಾರರಿಗೆ ನಿಕ್ಷೇಪ ಹಂಚಿಕೆ ಮಾಡುವಾಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ಮತ್ತು ಕಲ್ಲಿದ್ದಲು ಕಂಪೆನಿಗಳ ಅಧಿಕಾರಿಗಳನ್ನು ಒಳಗೊಂಡ ಪರಿಶೀಲನಾ ಸಮಿತಿಯು ನಿರ್ದಿಷ್ಟ ಅರ್ಜಿದಾರರಿಗೆ ನಿರ್ದಿಷ್ಟ ನಿಕ್ಷೇಪ ಹಂಚಿಕೆ ಮಾಡಿದ್ದು ಏಕೆ,  ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ ಎಂಬುದಕ್ಕೂ ಸಮಿತಿ ಕಾರಣ ನೀಡಿಲ್ಲ. ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT