ADVERTISEMENT

ಕೇಂದ್ರದ ಕಾರ್ಯಕ್ರಮ ಕಡಿತಕ್ಕೆಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST
ಕೇಂದ್ರದ ಕಾರ್ಯಕ್ರಮ ಕಡಿತಕ್ಕೆಚಿಂತನೆ
ಕೇಂದ್ರದ ಕಾರ್ಯಕ್ರಮ ಕಡಿತಕ್ಕೆಚಿಂತನೆ   

ನವದೆಹಲಿ:  ಜನ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ಸರಳೀಕರಣಗೊಳಿಸಲು ಮುಂದಾಗಿರುವ ಯೋಜನಾ ಆಯೋಗ, ಕೇಂದ್ರ ಪ್ರಾಯೋಜಿತ ಕಾರ್ಯಕ್ರಮ ಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿದೆ.

ಸದ್ಯಕ್ಕೆ ಕೇಂದ್ರ ಪ್ರಾಯೋಜಿತ ಅಭಿವೃದ್ಧಿ ಕಾರ್ಯಕ್ರಮಗಳು 147 ಇದ್ದು, ಅವುಗಳನ್ನು 59ಕ್ಕೆ ಇಳಿಸುವ ಪ್ರಸ್ತಾವ ಮುಂದಿಟ್ಟಿದೆ.

ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಕಷ್ಟವಾಗುತ್ತಿದೆ ಎನ್ನುವ ರಾಜ್ಯ ಸರ್ಕಾರಗಳ ಆಕ್ಷೇಪಣೆ ಹಿನ್ನೆಲೆಯಲ್ಲಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯೋಜನಾ ಆಯೋಗ ನಿರ್ಧರಿಸಿದೆ.

ಸದ್ಯಕ್ಕೆ ಇರುವ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸರಳೀಕರಣ ಹಾಗೂ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನಾ ಆಯೋಗ ಕಾರ್ಯ ಮಗ್ನವಾಗಿದೆ.

ಸ್ಥಳೀಯ ಭೌಗೋಳಿಕ ವಿನ್ಯಾಸ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು ಎನ್ನುವ ರಾಜ್ಯ ಸರ್ಕಾರಗಳ ಸಲಹೆಯನ್ನು ಈಗ ಕೇಂದ್ರ ಸರ್ಕಾರ ಪರಿಗಣಿಸಿದೆ.
ಯೋಜನಾ ಆಯೋಗದ ಸದಸ್ಯ ಬಿ.ಕೆ.ಚತುರ್ವೇದಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ, ಕೇಂದ್ರ ಯೋಜನೆಗಳನ್ನು ಸರಳೀಕರಣ ಗೊಳಿಸುವ  ನಿಟ್ಟಿನಲ್ಲಿ ವರದಿಯೊಂದನ್ನು ಸಿದ್ಧಪಡಿಸಿದೆ.

ಈ ವರದಿಯನ್ನು 12ನೇ ಪಂಚವಾರ್ಷಿಕ ಯೋಜನೆ (2012- 17)ಯಲ್ಲಿ ಸೇರಿಸುವಂತೆ ಸಲಹೆ ಮಾಡಲಾಗಿದೆ.
ಈ ವರದಿಯನ್ನು ಪಂಚವಾರ್ಷಿಕ ಯೋಜನೆಯೊಳಗೆ ಸೇರಿಸುವ ಮುನ್ನ ರಾಜ್ಯಗಳು ಮತ್ತು ಸಂಬಂಧಿಸಿದ ಸಚಿವಾಲಯಗಳು ಪ್ರತಿಕ್ರಿಯೆ ನೀಡು ವಂತೇರಲಾಗಿದೆ.

ಶಿಕ್ಷಣ, ಆರೋಗ್ಯ, ನೀರಾವರಿ, ನಗರ  ಮತ್ತು ಗ್ರಾಮೀಣ ಮೂಲಭೂತ ಸೌಕರ್ಯ, ಉದ್ಯೋಗ, ಕೃಷಿ ಮುಂತಾದ ಪ್ರಮುಖ ಕ್ಷೇತ್ರಗಳ  ಯೋಜನೆಗಳು ಹಾಗೆಯೇ ಇರಲಿವೆ.

ವಾರ್ಷಿಕ ನೂರು ಕೋಟಿ ರೂಪಾಯಿಗಳಿಗಿಂತ ಕಡಿಮೆ ವೆಚ್ಚದ ಯೋಜನೆಗಳನ್ನು ಸ್ಥಗಿತಗೊಳಿಸಲು ಸಮಿತಿ ಸಲಹೆ ಮಾಡಿದೆ. ಜತೆಗೆ ಸಂಬಂಧಿಸಿದ ರಾಜ್ಯಗಳು ಯೋಜನೆಯಲ್ಲಿ ಕೆಲವು ಬೌದ್ಧಿಕ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆಯೂ ಶಿಫಾರಸು ಮಾಡಲಾಗಿದೆ.

ಈ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅನುವಾಗುವಂತೆ ಯೋಜನಾ ವೆಚ್ಚದ ಶೇ 20ರಷ್ಟನ್ನು ಉಪ ವಲಯಗಳಿಗೂ ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಸಮಿತಿಯ ಶಿಫಾರಸುಗಳ ಪ್ರಕಾರ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ವಿದ್ಯುದೀಕರಣ,  ಉದ್ಯೋಗ ಖಾತರಿ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಬಳಿ ಶೇ 10ರಷ್ಟು ಹಣ ಇರಲೇಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.