ADVERTISEMENT

ಕೇಜ್ರಿವಾಲ್‌ಗೆ ಚಪ್ಪಲಿ ಎಸೆತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಲಖನೌ: ಭ್ರಷ್ಟಾಚಾರದ ವಿರುದ್ಧ ಕಹಳೆ ಮೊಳಗಿಸಿರುವ ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯ ಅರವಿಂದ್ ಕೇಜ್ರಿವಾಲ್‌ಮೇಲೆ ಯುವಕನೊಬ್ಬ ಚಪ್ಪಲಿ ಎಸೆದ ಪ್ರಕರಣ ಮಂಗಳವಾರ ಇಲ್ಲಿ ನಡೆಯಿತು.

ತಂಡದ ಮತ್ತೊಬ್ಬ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ ಮೇಲೆ ಆರು ದಿನಗಳ ಹಿಂದೆ ದೆಹಲಿಯಲ್ಲಿ ಯುವಕರಿಬ್ಬರು ಹಲ್ಲೆ ನಡೆಸಿದ್ದರು.

ಆರೋಪಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಜಿತೇಂದ್ರ ಪಾಠಕ್ ಎನ್ನಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಅಣ್ಣಾ ಬಳಗವು ಜನಲೋಕಪಾಲ ಮಸೂದೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಮಂಗಳವಾರ ಇಲ್ಲಿನ ಝುಲೇಲಾಲ್ ಉದ್ಯಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲು ಕೇಜ್ರಿವಾಲ್ ವೇದಿಕೆಯೆಡೆಗೆ ತೆರಳುತ್ತಿದ್ದಾಗ ಪಾಠಕ್ ಚಪ್ಪಲಿ ತೂರಿದ.

ಕೇಜ್ರಿವಾಲ್ ಜನತೆಯ ದಿಕ್ಕುತಪ್ಪಿಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರು ದನಿ ಎತ್ತುತ್ತಿಲ್ಲ. ಬದಲಿಗೆ, ಪ್ರಚಾರದಲ್ಲಿ ಅವರಿಗೆ ಆಸಕ್ತಿ ಎಂದು ಪಾಠಕ್ ಸುದ್ದಿಗಾರರ ಬಳಿ ದೂರಿದ.

ಸೋಮವಾರ ಬಾಂದಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಾರೆಯೇ?- ಎಂದೂ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದ ಈ ಯುವಕ ಕೇಳಿದ.

ಯುವಕನಿಗೆ ಸ್ವಯಂ ಸೇವಕರು ಹೊಡೆದಿದ್ದಾರೆ ಎಂಬ ದೂರು ಕೇಳಿ ಬಂದಿದ್ದು, ಅಣ್ಣಾ ತಂಡ ನಿರಾಕರಿಸಿದೆ. `ಆರೋಪಿಯನ್ನು ನಾವು ಕ್ಷಮಿಸಿದ್ದೇವೆ. ಆತನನ್ನು ಬಿಡುಗಡೆ ಮಾಡುವಂತೆ ಪೊಲೀಸರನ್ನು ಕೋರುತ್ತೇವೆ~ ಎಂದು ತಂಡದ ಸಂಜಯ್ ಸಿಂಗ್ ಹೇಳಿದ್ದಾರೆ.

ಸಭೆ ಆರಂಭಕ್ಕೆ ಮುನ್ನವೇ ಅಣ್ಣಾ ವಿರೋಧಿ ಕರಪತ್ರಗಳನ್ನು ಹಂಚಿದ್ದರಿಂದ ಇದೊಂದು ಪೂರ್ವಯೋಜಿತ ಕೃತ್ಯವೇ ಎಂಬ ಅನುಮಾನ ಕೂಡ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.