ADVERTISEMENT

ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಔಷಧಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ನವದೆಹಲಿ: ಬೌದ್ಧಿಕ ಹಕ್ಕಿನ  (ಪೇಟೆಂಟ್) ಕಾನೂನು ಹೋರಾಟದಲ್ಲಿ ಜರ್ಮನಿಯ ಬೇಯರ್ ಫಾರ್ಮಾಸೂಟಿಕಲ್ ಕಂಪೆನಿಗೆ ಸೋಲಾಗಿದ್ದರಿಂದ ಕ್ಯಾನ್ಸ್‌ರ್ ಔಷಧಿ ಉತ್ಪಾದನೆಗೆ ಭಾರತದ ಕಂಪೆನಿಯೊಂದಕ್ಕೆ ಅನುಮತಿ ದೊರಕಿದೆ. ಇದರಿಂದ ಕಿಡ್ನಿ ಮತ್ತು ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧಿ ದೊರಕಲಿದೆ. 

 ಭಾರತದ ಪೇಟೆಂಟ್ ನಿಯಂತ್ರಕರ ಆದೇಶದಂತೆ ಹೈದರಾಬಾದ್ ಮೂಲದ ನೆಟ್ಕೊ ಫಾರ್ಮಾಗೆ ಕ್ಯಾನ್ಸರ್ ನಿಯಂತ್ರಣ ಮಾತ್ರೆ ಉತ್ಪಾದಿಸುವ ಲೈಸೆನ್ಸ್ ದೊರೆತಿದೆ. ಈ ಕಂಪೆನಿಯು 120 ಮಾತ್ರೆಗಳ ಪ್ಯಾಕೆಟ್‌ಗೆ 8,800 ರೂಪಾಯಿ ದರ ನಿಗದಿಪಡಿಸಿದ್ದು, ಒಂದು ತಿಂಗಳಿಗೆ ಒಬ್ಬ ರೋಗಿಗೆ ಈ ಔಷಧಿ ಸಾಕಾಗುತ್ತದೆ.

ಬೇಯರ್ ಕಂಪೆನಿ ಮಾತ್ರ ಈ ಔಷಧವನ್ನು ಭಾರತದಲ್ಲಿ ಉತ್ಪಾದಿಸುತ್ತಿದ್ದರಿಂದ ಪ್ರತಿ ಪ್ಯಾಕ್‌ಗೆ 2.8 ಲಕ್ಷ ರೂಪಾಯಿ ನಿಗದಿಪಡಿಸಿತ್ತು. ಇದರಿಂದ ವಾರ್ಷಿಕ ವೆಚ್ಚ 33.65 ಲಕ್ಷ ರೂಪಾಯಿಗಳಾಗುತ್ತಿತ್ತು. ಬಡ ಮತ್ತು ಮಧ್ಯಮ ವರ್ಗದವರಿಗೆ ಈ ದುಬಾರಿ ಬೆಲೆ ನೀಡಿ ಔಷಧಿ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ.

ADVERTISEMENT

ನೆಟ್ಕೊ ಕಂಪೆನಿಯು ತಾನು ಮಾರಾಟ ಮಾಡಿದ ಕ್ಯಾನ್ಸರ್ ಔಷಧಿಯ ಮೇಲೆ ಶೇಕಡಾ 6ರಷ್ಟು ರಾಯಲ್ಟಿ ಹಣವನ್ನು ಬೇಯರ್ ಕಂಪೆನಿಗೆ ನೀಡಬೇಕಾಗುತ್ತದೆ.

ನೆಟ್ಕೊ ಕಂಪೆನಿಯು ಈ ಕ್ಯಾನ್ಸರ್ ನಿಯಂತ್ರಕ ಔಷಧಿಯ ಉತ್ಪಾದನೆಯ ಹಕ್ಕನ್ನು ಬೇರೆ ಕಂಪೆನಿಗಳಿಗೆ ನೀಡಬಾರದು ಎಂಬ ಷರತ್ತನ್ನು ಪೇಟೆಂಟ್ ನಿಯಂತ್ರಕರು ವಿಧಿಸಿದ್ದಾರೆ.

ಪ್ರತಿ ವರ್ಷ 600 ಬಡ ರೋಗಿಗಳಿಗೆ ನೆಟ್ಕೊ ಕಂಪೆನಿಯು ಉಚಿತವಾಗಿ ಕ್ಯಾನ್ಸರ್ ಔಷಧಿಯನ್ನು ನೀಡಬೇಕು ಎಂದು ಆದೇಶಿಸಲಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಸಮಯದಲ್ಲೂ ಕ್ಯಾನ್ಸರ್ ಔಷಧಿ ದೊರಕಬೇಕು ಎಂಬ ಷರತ್ತನ್ನು ಪಾಲಿಸುವಲ್ಲಿ ಬೇಯರ್ ಕಂಪೆನಿ ವಿಫಲವಾಗಿದ್ದರಿಂದ ಪೇಟೆಂಟ್ ನಿಯಂತ್ರಕರು ಈ ಔಷಧಿ ಉತ್ಪಾದನೆಯ ಹಕ್ಕನ್ನು ಇನ್ನೊಂದು ಕಂಪೆನಿಗೆ ನೀಡಿ ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.