ADVERTISEMENT

ಗಡಿ: ಬಿಗುವಿನ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ನವದೆಹಲಿ: ಪೂರ್ವ ಲಡಾಕ್ ಸಮೀಪದ ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಕೆಲವು ನಿರ್ಮಾಣಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ಈ ವಾರದ ಆರಂಭದಲ್ಲಿ ನಡೆದ ಭಾರತ -ಚೀನಾ ಸೇನಾಧಿಕಾರಿಗಳ ಸಭೆಯಲ್ಲಿ ಚೀನಾ ಷರತ್ತು ವಿಧಿಸಿರುವುದರಿಂದ ಉಭಯ ರಾಷ್ಟ್ರಗಳ ನಡುವೆ ಬಿಗುವಿನ ಸ್ಥಿತಿ ಉಂಟಾಗಿದೆ.

ಇಂತಹ ನಿರ್ಮಾಣಗಳು ಭಾರತದ ನಿಗಾ ಉಪಕರಣಗಳಾಗಿವೆ ಎನ್ನುವುದು ಚೀನಾದ ಆರೋಪ. ಆದರೆ ಈ ನಿರ್ಮಾಣಗಳನ್ನು ಭಾರತ-ಟಿಬೆಟನ್ ಪೊಲೀಸ್ ಪಡೆ ನಿರ್ಮಿಸಿತ್ತು ಎನ್ನುವುದು ಭಾರತದ ವಾದ. ಈ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ದೃಢೀಕರಣ ಬಂದಿಲ್ಲ ಎನ್ನುವುದು ಚೀನಾದ ವಾದ. ವಿವಾದಿತ ನಿರ್ಮಾಣಗಳನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಇವುಗಳ ಉಪಯುಕ್ತತೆ ಕುರಿತು ವಿಶ್ಲೇಷಣೆ ಮಾಡಲಾಗುವುದೆಂದು  ತಿಳಿದುಬಂದಿದೆ.

ಚೀನಾ ಸೈನಿಕರು ಈಗ ಜಮಾವಣೆಗೊಂಡಿರುವ ರಾಕಿ ನಲ್ಲಾ ಎಂಬ ಪ್ರದೇಶ 2ನೇ ವಿಶ್ವ ಸಮರ ನಡೆದ ದೌಲತ್ ಬೇಗ್ ಒಲ್ಡಿ ವಾಯು ನೆಲೆಯಿಂದ ದಕ್ಷಿಣಕ್ಕೆ ಬರಿ 30 ಕಿಮೀ ದೂರದಲ್ಲಿದೆ. ಈ ಪ್ರದೇಶವನ್ನು 2008ರಲ್ಲಿ ವಿಮಾನಗಳ ಸಾಗಾಟಕ್ಕಾಗಿ ಭಾರತೀಯ ವಾಯು ಪಡೆಯಿಂದ ಮತ್ತೆ ಸಕ್ರಿಯಗೊಳಿಸಲಾಗಿದೆ.

ಭಾರತೀಯ ಸೇನೆ ಹಾಗೂ ವಾಯು ಪಡೆಯಿಂದ ಗಡಿಯಲ್ಲಿ ಹೆಲಿಕಾಪ್ಟರ್‌ಗಳ ಹಾರಾಟವನ್ನು ಕಡಿಮೆಗೊಳಿಸಬೇಕು ಎಂಬ ನಿರ್ಬಂಧವನ್ನು ಚೀನಾ ಸೇನಾಧಿಕಾರಿಗಳು ಹಾಕಿರುವುದು ಅತಿಕ್ರಮಣದ ಪ್ರಚೋದನೆಗೆ ಕಾರಣವಾಗಿದೆ.

ಈ ನಡುವೆ ಸೇನಾ ಮುಖ್ಯಸ್ಥ ಜ. ಬಿಕ್ರಂ ಸಿಂಗ್ ಗುರುವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಭೇಟಿ ಮಾಡಿ ಗಡಿಯಲ್ಲಿ ಉಂಟಾಗಿರುವ ಸ್ಥಿತಿಗತಿಯ ಮಾಹಿತಿ ನೀಡಿದರು.

ಕಠಿಣವಾಗಿರಿ- ಒಮರ್: (ಜಮ್ಮು ವರದಿ) ದೇಶದೊಳಗೆ ಅತಿಕ್ರಮಿಸುತ್ತಿರುವ ನೆರೆ ರಾಷ್ಟ್ರಗಳ ಬಗ್ಗೆ ಕೇಂದ್ರ ತಳೆದಿರುವ ಧೋರಣೆಯನ್ನು ಟೀಕಿಸಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇಂಥ ಘಟನೆಗಳು ಮರುಕಳಿಸದಂತೆ ಪಾಕ್ ಹಾಗೂ ಚೀನಾ ವಿರುದ್ಧ ಕಠಿಣ ನಿಲುವು ತಳೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಚೀನಾ ನಿರಾಕರಣೆ (ಬೀಜಿಂಗ್ ವರದಿ): ಭಾರತದೊಂದಿಗಿನ ನೈಜ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಉಲ್ಲಂಘಿಸಿ, ಯಾವುದೇ ಅತಿಕ್ರಮಣದ ಪ್ರಚೋದನೆಗೆ ತನ್ನ ಪಡೆಗಳು ಅನುವು ಮಾಡಿಲ್ಲ ಎಂದು ಚೀನಾ ಪುನರುಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.