ADVERTISEMENT

ಗಡ್‌ಚಿರೋಲಿ: 10 ಜನರ ಅಪಹರಣ:ನಕ್ಸಲರಿಂದ ಇಬ್ಬರು ಆದಿವಾಸಿಗಳ ಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಗಡ್‌ಚಿರೋಲಿ (ಪಿಟಿಐ): ಮಹಾರಾಷ್ಟ್ರದ ಪೂರ್ವಭಾಗದ ಮಾರ್ಕೆಗಾಂವ್‌ಗೆ ಬೆಳಿಗ್ಗೆ ದಾಳಿ ಮಾಡಿದ ನಕ್ಸಲರು ಇಬ್ಬರು ಆದಿವಾಸಿಗಳನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಹತ್ಯೆ ಮಾಡಿ ಸುಮಾರು 12 ಜನರನ್ನು ಅಪಹರಿಸಿದ್ದಾರೆ.

ಸಶಸ್ತ್ರ ನಕ್ಸಲೀಯರ ಗುಂಪೊಂದು ಮಾರ್ಕೆಗಾಂವ್‌ಗೆ ದಾಳಿ ಮಾಡಿ ಗ್ರಾಮಸ್ಥರಿಗೆ ಒಂದೆಡೆ ಸೇರುವಂತೆ ಆದೇಶಿಸಿತು. ನಂತರ ದೇವಸೆ ಉಸಂಡಿ ಮತ್ತು ರಾಮ್ ನರೋಟೆ ಎಂಬಿಬ್ಬರನ್ನು ಪಕ್ಕಕ್ಕೆ ಕರೆದು ಎಲ್ಲರೆದುರೇ ಹರಿತವಾದ ಆಯುಧದಿಂದ ಗಂಟಲನ್ನು ಕತ್ತರಿಸಿ ಹತ್ಯೆ ಮಾಡಿದರು.

ನಂತರ ನಕ್ಸಲರು 10ರಿಂದ 12 ಜನ ಆದಿವಾಸಿಗಳನ್ನು ಅಪಹರಿಸಿ ಪಕ್ಕದ ಕಾಡಿನಲ್ಲಿ ಮಾಯವಾದರು. ಇಬ್ಬರ ಹತ್ಯೆಯ ಕಾರಣ ಗೊತ್ತಾಗಲಿಲ್ಲ. ಈ ಇಬ್ಬರು ಪೊಲೀಸ್ ಮಾಹಿತಿದಾರರು ಎಂದು ಶಂಕಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸ್ಥಳಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಲಾಗಿದ್ದು, ಶೋಧನಾ ಕಾರ್ಯ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.