ADVERTISEMENT

ಗಣಿ ಗುತ್ತಿಗೆ: ಆದೇಶಕ್ಕೆ ‘ಸುಪ್ರೀಂ’ ತಡೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ಗಣಿ ಗುತ್ತಿಗೆ: ಆದೇಶಕ್ಕೆ ‘ಸುಪ್ರೀಂ’ ತಡೆ
ಗಣಿ ಗುತ್ತಿಗೆ: ಆದೇಶಕ್ಕೆ ‘ಸುಪ್ರೀಂ’ ತಡೆ   

ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರು ಬಳಿ ಆಶಾ ಮೈನಿಂಗ್‌ ಕಂಪನಿಗೆ 25 ಎಕರೆ ಭೂಮಿಯ ಗಣಿಗುತ್ತಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಕಳೆದ ವರ್ಷ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠವು, ಗಣಿ ಗುತ್ತಿಗೆ ನೀಡುವಂತೆ ಸೂಚಿಸಿ 2017ರ ಜನವರಿ 6ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಅಮಾನತಿನಲ್ಲಿ ಇರಿಸಿದೆ.

ಅಲ್ಲದೆ, ಆಶಾ ಮೈನಿಂಗ್‌ ಕಂಪನಿ ಹಾಗೂ ಅದರ ಪಾಲುದಾರರಾದ ಆಶಾ ಮಹಮ್ಮದ್‌ ಹಾರೂನ್‌ ಅವರಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಪೀಠ, ಮೇಲ್ಮನವಿ ಸಲ್ಲಿಸಲು ವಿಳಂಬ ನೀತಿ ಅನುಸರಿಸಿರುವ ಕಾರಣ ಕ್ಷಮೆ ಕೋರಿರುವ ರಾಜ್ಯ ಸರ್ಕಾರದಿಂದಲೂ ಪ್ರತಿಕ್ರಿಯೆ ಕೋರಿ ನೋಟಿಸ್‌ ನೀಡಿದೆ.

ADVERTISEMENT

‘ಗಣಿ ಮತ್ತು ಖನಿಜ (ಅಭಿವೃದ್ಧಿ, ನಿಯಂತ್ರಣ) ಕಾಯ್ದೆ– 1957ರ ಅಡಿ ಗಣಿಗುತ್ತಿಗೆ ಪಡೆಯಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ ಎಂದು ತಿಳಿಸಿ ಗಣಿ ಕಂಪನಿ ಸಲ್ಲಿಸಿದ್ದ ರಿಟ್‌ ಅರ್ಜಿ ಆಧರಿಸಿ ಗಣಿ ಗುತ್ತಿಗೆ ನೀಡಲು ಸೂಚಿಸಿದ್ದ ಹೈಕೋರ್ಟ್ ಆದೇಶ ಸರಿಯಲ್ಲ’ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ನ್ಯಾಯಪೀಠದೆದುರು ವಾದಿಸಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರ ಪುತ್ರ ಅಲ್ಲಂ ಪ್ರಶಾಂತ್‌ ಹಾಗೂ ಆಂಜನೇಯ ಕದಂ ಅವರಿಗೆ ಕ್ರಮವಾಗಿ 19.50 ಎಕರೆ ಹಾಗೂ 40 ಎಕರೆ ಭೂಮಿಯಲ್ಲಿ ಮತ್ತು ದೊಡ್ಡಣ್ಣವರ್‌ ಬ್ರದರ್ಸ್‌ ಕಂಪನಿಗೂ ಗಣಿ ಗುತ್ತಿಗೆ ನೀಡುವಂತೆ ಇದೇ ಮಾದರಿಯಲ್ಲಿ ಸೂಚಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.