ನವದೆಹಲಿ (ಐಎಎನ್‌ಎಸ್): ರಾಜಧಾನಿ ದೆಹಲಿಯಲ್ಲಿ 2012ರ ಡಿ. 16ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಈ ನಾಲ್ವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ರೇವಾ ಖೇತ್ರಪಾಲ್‌್ ಹಾಗೂ ಪ್ರತಿಭಾ ರಾಣಿ ಅವರಿದ್ದ ಪೀಠ ಇದನ್ನು ತಳ್ಳಿಹಾಕಿದೆ.
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2013ರ ಸೆಪ್ಟೆಂಬರ್ 13ರಂದು ಮುಕೇಶ್ (26), ಅಕ್ಷಯ್ ಠಾಕೂರ್‌್ (28), ಪವನ್ ಗುಪ್ತಾ (19) ಹಾಗೂ ವಿನಯ್ ಶರ್ಮಾಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಗೆಳೆಯನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಇವರಿಬ್ಬರನ್ನು ರಸ್ತೆ ಪಕ್ಕ ಎಸೆದು ಹೋಗಿದ್ದರು. ಸುಮಾರು ಹದಿಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿದ ವಿದ್ಯಾರ್ಥಿನಿ ಡಿಸೆಂಬರ್‌್ 29ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಪ್ರಮುಖ ಘಟನೆಗಳು
*ಡಿಸೆಂಬರ್‌್ 16, 2012: ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾಮೆಡಿಕಲ್‌್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
*ಡಿಸೆಂಬರ್‌್ 23: ಪ್ರಕರಣದ ವಿಚಾರಣೆಗೆ ದೆಹಲಿ ಹೈಕೋರ್ಟ್‌ನಿಂದ ತ್ವರಿತ ನ್ಯಾಯಾಲಯ ರಚನೆ
*ಡಿಸೆಂಬರ್‌್ 27: ಚಿಕಿತ್ಸೆಗಾಗಿ ವಿದ್ಯಾರ್ಥಿನಿ ಸಿಂಗಪುರಕ್ಕೆ ಸ್ಥಳಾಂತರ
*ಡಿಸೆಂಬರ್‌್ 29: ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ವಿದ್ಯಾರ್ಥಿನಿ
*ಸೆಪ್ಟೆಂಬರ್‌್ 13, 2013: ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ
*ಮಾರ್ಚ್ 13, 2014: ಗಲ್ಲು ಶಿಕ್ಷೆ ಎತ್ತಿ ಹಿಡಿದ ದೆಹಲಿ ಹೈಕೋರ್ಟ್
‘ಲೈಫ್ ಆಫ್ ಪೈ’ ಪ್ರಭಾವ
* ‘ಅತ್ಯಾಚಾರಕ್ಕೆ ಒಳಗಾಗುವ ಮುನ್ನ ವಿದ್ಯಾರ್ಥಿನಿ ತನ್ನ ಗೆಳೆಯನ ಜತೆ ‘‘ಲೈಫ್ ಆಫ್ ಪೈ’’ ಚಿತ್ರ ನೋಡಿದ್ದಳು. ಇದು ಅವಳ ಮೇಲೆ ಗಾಢ ಪ್ರಭಾವ ಬೀರಿತ್ತು. ಹಾಗಾಗಿ ಅವಳು ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸಿದ್ದಳು’
* ‘ವಿದ್ಯಾರ್ಥಿನಿ ನೀಡಿದ್ದ ಮರಣ ಪೂರ್ವ ಹೇಳಿಕೆಗಳಲ್ಲಿ ಯಾವುದೇ ಗೊಂದಲ ಇರಲಿಲ್ಲ’
–ದೆಹಲಿ ಹೈಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.