ADVERTISEMENT

‘ಗಲ್ಲು: ನ್ಯಾಯದ ಹೆಸರಿನ ಅಮಾನವೀಯ ಹತ್ಯೆ’: ತೀರ್ಪು ಕಾಯ್ದಿರಿಸಿದ ಸುಪ್ರೀಂ ‌ಕೋರ್ಟ್‌

ನಿರ್ಭಯಾ ಪ್ರಕರಣದ ಅತ್ಯಾಚಾರಿಗಳ ವಾದ

ಪಿಟಿಐ
Published 4 ಮೇ 2018, 19:44 IST
Last Updated 4 ಮೇ 2018, 19:44 IST
1. ಅಕ್ಷಯ್‌ ಕುಮಾರ್‌, 2. ಪವನ್‌, 3. ಮುಕೇಶ್‌, 4. ವಿನಯ್‌
1. ಅಕ್ಷಯ್‌ ಕುಮಾರ್‌, 2. ಪವನ್‌, 3. ಮುಕೇಶ್‌, 4. ವಿನಯ್‌   

ನವದೆಹಲಿ: ಗಲ್ಲು ಶಿಕ್ಷೆ ‘ನ್ಯಾಯದ ಹೆಸರಿನಲ್ಲಿ ನಡೆಯುವ ಅಮಾನವೀಯ ಹತ್ಯೆ’ ಎಂದು ನಿರ್ಭಯಾ ಅತ್ಯಾಚಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಆರು ವರ್ಷಗಳ ಹಿಂದೆ(2012) ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಗರಿಷ್ಠ ಶಿಕ್ಷೆಯಿಂದ ತಮ್ಮನ್ನು ರಕ್ಷಿಸುವಂತೆ ಕೋರಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ತೀರ್ಪು ಕಾಯ್ದಿರಿಸಿದೆ.ಮಂಗಳವಾರದೊಳಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ವಾದಿ ಮತ್ತು ಪ್ರತಿವಾದಿ ವಕೀಲರಿಗೆ ಸೂಚಿಸಿದೆ.

ADVERTISEMENT

ಜೀವನ ಇನ್ನೂ ಬಾಕಿ ಇದೆ!: ತಾವಿಬ್ಬರೂ ಯುವಕರಾಗಿದ್ದು, ಬಡ ಕುಟುಂಬದಿಂದ ಬಂದಿದ್ದೇವೆ. ಹಾಗಾಗಿ ಶಿಕ್ಷೆ ಕಡಿಮೆ ಮಾಡಬೇಕು ಎಂದು ವಿನಯ್ ಮತ್ತು ಪವನ್ ಮನವಿ ಮಾಡಿದರು.

ತಮ್ಮ ಕಕ್ಷಿದಾರರು ವೃತ್ತಿಪರ ಅಪರಾಧಿಗಳಲ್ಲ. ಅಪರಾಧ ಹಿನ್ನೆಲೆಯೂ ಇಲ್ಲ. ಅವರ ಮನ ಪರಿವರ್ತನೆಗೆ ಅವಕಾಶ ನೀಡಬೇಕು ಎಂದು ವಕೀಲ ಎ.ಪಿ. ಸಿಂಗ್‌ ಮನವಿ ಮಾಡಿದರು.

ಈಗಾಗಲೇ ಸಾಕಷ್ಟು ದೇಶಗಳಲ್ಲಿ ಅಮಾನವೀಯ ಗಲ್ಲು ಶಿಕ್ಷೆ ರದ್ದಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ದೀಪಕ್‌ ಮಿಶ್ರಾ, ಈ ದೇಶದಲ್ಲಿ ಮರಣ ದಂಡನೆ ಇನ್ನೂ ಜಾರಿಯಲ್ಲಿದೆ ಎಂದರು.

ಮತ್ತೊಬ್ಬ ಅಪರಾಧಿ ಮುಕೇಶ್‌ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಮುಗಿಸಿದ ಸುಪ್ರೀಂ ಕೋರ್ಟ್‌ ಆ ತೀರ್ಪುನ್ನೂ ಕಾಯ್ದಿರಿಸಿದೆ. ಅಕ್ಷಯ್‌ ಕುಮಾರ್‌ ಇನ್ನೂ ಅರ್ಜಿ ಸಲ್ಲಿಸಿಲ್ಲ.

ಆರೋಪಿಗಳಲ್ಲಿ ಒಬ್ಬನಾಗಿದ್ದ ಬಸ್‌ ಚಾಲಕ ರಾಮ್‌ ಸಿಂಗ್‌ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿ ಮೂರು ವರ್ಷ ಶಿಕ್ಷೆ ಪೂರೈಸಿ ಹೊರ ಬಂದಿದ್ದಾನೆ.

ಕರಾಳ ರಾತ್ರಿ: 2012ರ ಡಿಸೆಂಬರ್‌ 16ರಂದು ರಾತ್ರಿ ಚಲಿಸುವ ಬಸ್‌ನಲ್ಲಿಯೇ 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆರು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿಯ ನ್ಯಾಯಾಲಯ ಮುಕೇಶ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ ಮತ್ತು ಅಕ್ಷಯ್‌ ಕುಮಾರ್‌ ಸಿಂಗ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದವು.

**

ಮರಣ ದಂಡನೆ ಅಪರಾಧಿಗಳನ್ನು ಕೊಲ್ಲುತ್ತದೆ. ಅಪರಾಧಗಳನ್ನು ಅಲ್ಲ. ಹಾಗಾಗಿ ಸಾಕಷ್ಟು ರಾಷ್ಟ್ರಗಳಲ್ಲಿ ಗಲ್ಲು ಶಿಕ್ಷೆ ರದ್ದು ಮಾಡಲಾಗಿದೆ.

–ಎ.ಪಿ. ಸಿಂಗ್‌, ಅತ್ಯಾಚಾರಿಗಳ ಪರ ವಕೀಲ

**

ಸಜೀವ ದಹನ

ಪಟ್ನಾ ವರದಿ: ಮನೆಯಲ್ಲಿ ಒಬ್ಬಂಟಿಯಾಗಿದ್ದ 14 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ನಂತರ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ಮುಖಂಡರು ಶುಕ್ರವಾರ ಆರೋಪಿಗಳಿಗೆ ತಲಾ ನೂರು ಬಸ್ಕಿ ಹೊಡೆಯುವ (ಉಟ್‌, ಬೈಠ್‌) ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಬಾಲಕಿಯ ಮನೆಗೆ ತೆರಳಿ ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

**

ಕಠುವಾ: ಸಿಬಿಐ ತನಿಖೆಗೆ ಒತ್ತಾಯ

ನವದೆಹಲಿ ವರದಿ: ಕಠುವಾ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಮುಖ್ಯ ಆರೋಪಿ ಸಾಂಜಿ ರಾಮ್‌ ಶುಕ್ರವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾನೆ. ಅತ್ಯಾಚಾರದಲ್ಲಿ ತನ್ನ ಪಾತ್ರವಿಲ್ಲ. ತಾನು ಅಮಾಯಕ ಎಂದು ಆತ ವಾದಿಸಿದ್ದಾನೆ.

ಬ್ರಿಟನ್‌ ನಟಿ ಬೆಂಬಲ: ಕಠುವಾ ಅತ್ಯಾಚಾರ ಸಂತ್ರಸ್ತೆ ಪರ ವಾದ ಮಂಡಿಸುತ್ತಿರುವ ವಕೀಲೆ ದೀಪಿಕಾ ಸಿಂಗ್‌ ರಜಾವತ್‌ ಅವರಿಗೆ ಹ್ಯಾರಿ ಪಾಟರ್‌ ಚಿತ್ರದ ನಾಯಕಿ ಹಾಗೂ ಬ್ರಿಟನ್‌ ನಟಿ ಎಮ್ಮಾ ವ್ಯಾಟ್ಸನ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

**

ಮಗಳ ಬಲಾತ್ಕಾರ: ತಂದೆ ಬಂಧನ

ಬಿಹಾರಶರೀಫ್‌: ಮಗಳ ಮೇಲೆ ಬಲಾತ್ಕಾರ ನಡೆಸುತ್ತಿದ್ದ ತಂದೆಯೊಬ್ಬನನ್ನು ನೆರೆಹೊರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರು ತಿಂಗಳಿಂದ ಆತ ಈ ಕೃತ್ಯ ನಡೆಸುತ್ತಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಚಂಡಿಗಡ ವರದಿ: ಹರಿಯಾಣದ ಚರ್ಖಿ ದಾದ್ರಿಯ ಮಾರುಕಟ್ಟೆಯಲ್ಲಿ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿದ್ದ ಮೂವರು ಬಾಲಕರು ನಂತರ ಸಾಮೂಹಿಕ ಬಲಾತ್ಕಾರ ನಡೆಸಿದ್ದಾರೆ.

ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.

ಪಟಿಯಾಲಾ ವರದಿ: ಮೂರು ವರ್ಷದ ಬಾಲಕಿಯ ಮೇಲೆ ಜಮೀನ್ದಾರನೊಬ್ಬ ಅತ್ಯಾಚಾರವೆಸಗಿದ ಘಟನೆ ಪಂಜಾಬ್‌ನ ಪಟಿಯಾಲಾದಲ್ಲಿ ನಡೆದಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗಳನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಭುವನೇಶ್ವರ ವರದಿ: ಒಡಿಶಾದ ಬಾಲೇಶ್ವರ ಜಿಲ್ಲೆಯ ಸನಾ ಮಾಟಿಪುರ್‌ ಗ್ರಾಮದಲ್ಲಿ 75 ವರ್ಷದ ವೃದ್ಧನೊಬ್ಬ 10 ವರ್ಷದ ಬಾಲಕಿಗೆ ಸಿಹಿತಿಂಡಿ ಆಮಿಷ ತೋರಿಸಿ ಅತ್ಯಾಚಾರ ನಡೆಸಿದ್ದಾನೆ. ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

ಜಬಲಪುರ (ಮಧ್ಯಪ್ರದೇಶ) ವರದಿ: ಕಾಂಗ್ರೆಸ್‌ ಶಾಸಕ ಹೇಮಂತ್‌ ಕಟಾರೆ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿ ಶುಕ್ರವಾರ ರಾಗ ಬದಲಿಸಿದ್ದಾಳೆ.

ಬಿಜೆಪಿ ಮುಖಂಡ ಅರವಿಂದ್‌ ಭಡೋರಿಯಾ ಕುಮ್ಮಕ್ಕಿನ ಮೇಲೆ ಈ ಆರೋಪ ಮಾಡಿದ್ದಾಗಿ  21 ವರ್ಷದ ವಿದ್ಯಾರ್ಥಿನಿ ಗುರುವಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾಳೆ.

ಆರೋಪ ತಳ್ಳಿ ಹಾಕಿರುವ ಭಡೋರಿಯಾ, ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.