ADVERTISEMENT

ಚಂದ್ರಬಾಬು ಬಂಧನ; ಭುಗಿಲೆದ್ದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 8:20 IST
Last Updated 21 ಡಿಸೆಂಬರ್ 2010, 8:20 IST

ಹೈದರಾಬಾದ್, (ಪಿಟಿಐ): ಪ್ರಕೃತಿ ವಿಕೋಪದಿಂದಾಗಿ ಬೆಳೆ ನಾಶದಿಂದ ತೊಂದರೆಗೆ ಸಿಲುಕಿರುವ ರೈತರಿಗೆ ಹೆಚ್ಚು ಪರಿಹಾರ ನೀಡಬೇಕು ಎಂದು ಒತ್ತಾಯಿಸಲು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಆರೋಗ್ಯ ಕ್ಷೀಣಿಸಿದ್ದು ಪೊಲೀಸರು ಅವರನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಾಯ್ಡು ಅವರನ್ನು ಸೋಮವಾರ ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿಸಿದ್ದು, ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ನಿಮ್ಸ್) ದಾಖಲಿಸಲಾಗಿದೆ.
 ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಪಡೆಯಲು ನಿರಾಕರಿಸಿರುವ ನಾಯ್ಡು ಅವರ ಆರೋಗ್ಯ ಸಿತಿ ಬಗ್ಗೆ ಆತಂಕ  ಉಂಟಾಗಿದೆ. ಅವರು ತಕ್ಷಣವೇ ಉಪವಾಸವನ್ನು ಕೈಬಿಡಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ನಿಮ್ಸ್‌ನ ಪ್ರಭಾರ ನಿರ್ದೇಶಕ  ಪಿ.ವಿ.ರಮೇಶ್ ತಿಳಿಸಿದರು.

ಈ ಮಧ್ಯೆ, ನಾಯ್ಡು ಅವರ ಬಂಧನವನ್ನು ಖಂಡಿಸಿ, ತೆಲುಗುದೇಶಂ ಪಕ್ಷದ ಕಾರ್ಯಕರ್ತರು ಆಂಧ್ರ ಬಂದ್‌ಗೆ ಕರೆ ನೀಡಿದ್ದಾರೆ. ರಾಜ್ಯದ ವಿವಿಧೆಡೆ ಸರ್ಕಾರಿ ಸ್ವಾಮ್ಯದ ಬಸ್ ಡಿಪೊಗಳ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಸ್ ಸಂಚಾರಕ್ಕೆ ಅಡ್ಡಿಪಡಿಸಿದರು. ಹೈದರಾಬಾದ್, ವಿಶಾಖಪಟ್ಟಣ, ವಿಜಯವಾಡ, ತಿರುಪತಿ, ಅನಂತಪುರ, ನೆಲ್ಲೂರು, ಕರೀಂನಗರ, ವಾರಂಗಲ್, ಕಡಪಾ ಸೇರಿದಂತೆ ರಾಜ್ಯದ ವಿವಿಧೆಡೆ ವಾಣಿಜ್ಯ ವಹಿವಾಟಿಗೂ ತೊಂದರೆಯಾಯಿತು.

ನಾಯ್ಡು ಅವರನ್ನು ಪೊಲೀಸರು ಬಂಧಿಸುವ ಸಂದರ್ಭದಲ್ಲಿ ವೇದಿಕೆಯ ಮೆಟ್ಟಿಲುಗಳಿಂದ ಜಾರಿ ಅವರು ಕೆಳಗೆಬಿದ್ದರು. ಪೊಲೀಸರು ಅನಾಗರಿಕರಾಗಿ ವರ್ತಿಸಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಅಸ್ವಸ್ಥರಾಗಿದ್ದ ನಾಯ್ಡು ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲು ಹಲವು ಹಿರಿಯ ಸಚಿವರು ಚರ್ಚಿಸಿ ನಿಧಾರಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಆರೋಗ್ಯ ಸಚಿವ ಡಿ.ಎಲ್.ರವೀಂದ್ರ ರೆಡ್ಡಿ ತಿಳಿಸಿದರು.

ಮುಖ್ಯಮಂತ್ರಿ ಕಿರಣ್ ಕುಮಾರ್‌ರೆಡ್ಡಿ ಭಾನುವಾರ ರಾತ್ರಿ ನಾಯ್ಡು ಅವರನ್ನು ಭೇಟಿ ಮಾಡಿ ಉಪವಾಸವನ್ನು ಕೈಬಿಡುವಂತೆ ವಿನಂತಿಸಿದ್ದರು. ರೈತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಮನಹರಿಸಲಿದೆ ಎಂದು ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.