ADVERTISEMENT

ಚಳಿ: ಕಾಶ್ಮೀರ ಕಣಿವೆಗೆ ಹಿಮದ ಹೊದಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ಚಳಿರಾಯನ ಹೊಡೆತಕ್ಕೆ  ಸಿಕ್ಕು ನಡುಗುತ್ತಿವೆ. ಇಡೀ ಕಾಶ್ಮೀರ ಕಾಣಿವೆ ಹಿಮದ ಹೊದಿಕೆ ಹೊದ್ದು ಮಲಗಿದೆ. ರಾಜಧಾನಿ ದೆಹಲಿ ಹಾಗೂ ಸುತ್ತಲಿನ ಪ್ರದೇಶಗಳು, ಪಂಜಾಬ್, ಹರಿಯಾಣದ ಹಸಿರಿನ ಬಯಲನ್ನು ಮಂಜಿನ ಮುಸುಕು ಆವರಿಸಿದೆ.

ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ. ಪ್ರಸಿದ್ಧ ವಿಹಾರಿ ತಾಣವಾದ ಉತ್ತರ ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 12.6 ಡಿಗ್ರಿ ಸೆಲ್ಸಿಯಸ್, ಲಡಾಕ್ ಪ್ರಾಂತ್ಯದ ಲೇಹ್ ಪಟ್ಟಣದಲ್ಲಿ ಮೈನಸ್ 16.6 ಡಿಗ್ರಿ ಹಾಗೂ ಕಾರ್ಗಿಲ್ ಜಿಲ್ಲೆಯಲ್ಲಿ  ಮೈನಸ್ 18 ಡಿಗ್ರಿಯಷ್ಟು ಇಳಿದಿದೆ.

ಪರಿಹಾರ ಕಾರ್ಯಕ್ಕೆ ಅಡಚಣೆ (ಜಮ್ಮು ವರದಿ): ಹಿಮದಿಂದ ಆವೃತವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಯುಪಡೆ ಆರಂಭಿಸಿದ್ದ ಪರಿಹಾರ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನದಿಂದ ಅಡಚಣೆ ಉಂಟಾಗಿದೆ.

ರೈಲು ಸಂಚಾರ ಅಸ್ತವ್ಯಸ್ತ (ದೆಹಲಿ ವರದಿ):
ಉತ್ತರ ಭಾರತದಲ್ಲಿ ದಟ್ಟ ಮಂಜು ಆವರಿಸಿರುವುದರಿಂದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. 39ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ. ರಾಜಧಾನಿ ಹಾಗೂ ಗರೀಬ್‌ರಥ್ ಸೇರಿದಂತೆ ದೆಹಲಿಯಿಂದ ಹೊರಡಬೇಕಿದ್ದ 14ಕ್ಕೂ ಹೆಚ್ಚು ರೈಲುಗಳು ನಿಗದಿತ ವೇಳೆಗಿಂತ ತಡವಾಗಿ ಪ್ರಯಾಣ ಆರಂಭಿಸಿವೆ.

ಪಂಜಾಬ್‌ನಲ್ಲಿ ಮಂಜು (ಚಂಡೀಗಡ ವರದಿ):  ಚಳಿಯ ಹೊಡೆತದಿಂದ ಪಾರಾಗಿ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಪಂಜಾಬ್, ಹರಿಯಾಣದ ಜನ ಮತ್ತೆ ಕಾಣಿಸಿಕೊಂಡ ಚಳಿ ಹಾಗೂ ಮಂಜಿನಿಂದ ಹೈರಾಣಾಗಿದ್ದಾರೆ.
ಹರಿಯಾಣದ ನರ್‌ನೌಲ್‌ನಲ್ಲಿ ಅತಿ ಕಡಿಮೆ ತಾಪಮಾನ ಅಂದರೆ ಮೈನಸ್ ಎರಡು ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಪಂಜಾಬ್‌ನ ಅಮೃತಸರ, ಜಲಂಧರ್, ಪಟಿಯಾಲಾ, ಲೂಧಿಯಾನಾಗಳಲ್ಲೂ ಚಳಿಯಿಂದ ಜನ ನಡುಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.