ನವದೆಹಲಿ: 2ಜಿ ತರಂಗಾಂತರ ಹಗರಣ ಈಗ ಗೃಹ ಸಚಿವ ಪಿ.ಚಿದಂಬರಂ ಅವರಿಗೂ ಬಿಸಿ ಮುಟ್ಟಿಸುತ್ತಿದೆ.
ಅವರು 2008ರಲ್ಲಿ ಹಣಕಾಸು ಸಚಿವರಾಗಿದ್ದಾಗ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರ ನಿರ್ಧಾರವನ್ನು ಬೆಂಬಲಿಸಿ ತೆಗೆದುಕೊಂಡ ನಿರ್ಧಾರದ ದಾಖಲೆಗಳು ವಿವಾದಕ್ಕೆ ಹೊಸ ತಿರುವು ನೀಡುತ್ತಿವೆ.
2008ರಲ್ಲಿ ಹಣಕಾಸು ಇಲಾಖೆಯ ಉಪ ನಿರ್ದೇಶಕ ಪಿ.ಜಿ.ಎಸ್.ರಾವ್ ಅವರು ಪ್ರಧಾನಿ ಕಚೇರಿಗೆ ಕಳುಹಿಸಿದ ಟಿಪ್ಪಣಿಯಲ್ಲಿ, 2001ರಲ್ಲಿ ತರಂಗಾಂತರ ಹಂಚಿಕೆಗೆ ನಿಗದಿ ಮಾಡಿದ್ದ ಶುಲ್ಕವನ್ನೇ ಮುಂದುವರಿಸಲು ಚಿದಂಬರಂ ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಗರಣ ಚಿದು ಅವರ ಸಚಿವ ಸ್ಥಾನಕ್ಕೇ ಚ್ಯುತಿ ತರುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಮಧ್ಯೆ ಬಿಜೆಪಿ ಚಿದಂಬರಂ ಅವರಿಂದ ವಿವರಣೆ ಬಯಸಿದ್ದು, ಒಮ್ಮೆ ಅವರು ಸರಿಯಾದ ವಿವರಣೆ ನೀಡದಿದ್ದಲ್ಲಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದೆ.
ಎಡಪಕ್ಷಗಳು ಸಹ ಚಿದಂಬರಂ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿವೆ. ತರಂಗಾಂತರ ಹಂಚಿಕೆಯ ಪ್ರವೇಶ ಶುಲ್ಕವನ್ನು ಹೆಚ್ಚಿಸಬೇಕು ಎಂಬ ಪ್ರಸ್ತಾವವಿದ್ದರೂ ಚಿದಂಬರಂ ಹಳೆಯ ದರವನ್ನೇ ಮುಂದುವರಿಸಲು ಒಲವು ತೊರಿದ್ದರು ಎಂಬುದು ಸಚಿವಾಲಯದ ಟಿಪ್ಪಣಿಯಿಂದ ಸ್ಪಷ್ಟವಾಗಿದೆ.
ಚಿದಂಬರಂ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ ಸಿಬಿಐ ಮತ್ತು ಕೇಂದ್ರ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ತನಿಖೆ ಮುಕ್ತಾಯಗೊಂಡು ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿರುವುದರಿಂದ ಈ ಹಂತದಲ್ಲಿ ಮತ್ತೆ ತನಿಖೆಗೆ ಆದೇಶ ನೀಡಬೇಕು ಎಂದು ಮನವಿ ಮಾಡುವುದು ಸರಿಯಲ್ಲ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.