ನವದೆಹಲಿ: ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ಸೋಮವಾರ ಮಂಡಿಸಲಿರುವ 2014–15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಲೋಕಸಭಾ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಸಾಮಾನ್ಯ ಜನರಿಗೆ ಒಂದಷ್ಟು ಕೊಡುಗೆಗಳನ್ನು ನೀಡುವ ನಿರೀಕ್ಷೆ ಇದೆ.
ಜುಲೈವರೆಗಿನ ಖರ್ಚು ವೆಚ್ಚಗಳಿಗೆ ಸಂಸತ್ತಿನ ಅನುಮತಿ ಪಡೆಯುವುದಕ್ಕಾಗಿ ಲೇಖಾನುದಾನವನ್ನೂ ಮಂಡಿಸಲಿದ್ದು, ವಿತ್ತೀಯ ಕೊರತೆ ನಿಯಂತ್ರಣದಲ್ಲಿ ಇರಿಸಲು ಅವರು ಸಾಕಷ್ಟು ಶ್ರಮಿಸಬೇಕಾಗಿದೆ.
ಮಂದಗತಿಯಲ್ಲಿ ಸಾಗುತ್ತಿರುವ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಲು ಕ್ರಮಗಳು ಮತ್ತು ಹೆಂಗಳೆಯರ ಮನ ಗೆಲ್ಲಲು ಚಿನ್ನದ ಮೇಲಿನ ಸುಂಕ ಕಡಿತದಂತಹ ಕೊಡುಗೆಗಳ ನಿರೀಕ್ಷೆ ಇದೆ. ಇತ್ತೀಚಿನ ವರ್ಷಗಳಲ್ಲಿ ಬಹಳ ನಿಧಾನಗತಿಯ ಪ್ರಗತಿ ದಾಖಲಿಸುತ್ತಿರುವ ವಾಹನ ಉದ್ಯಮಕ್ಕೆ ಅಬಕಾರಿ ಸುಂಕ ಕಡಿತದಂತಹ ಕೆಲವು ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಗ್ರಾಹಕ ವಸ್ತು ವಲಯಕ್ಕೆ ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಳ್ಳಬಹುದು ಎಂದು ವಿಶ್ಲೇಷಿಸಲಾಗಿದೆ.
ಸಂಪ್ರದಾಯದಂತೆ ಮಧ್ಯಂತರ ಬಜೆಟ್‌ನಲ್ಲಿ ನೇರ ತೆರಿಗೆಗಳಲ್ಲಿ ಬದ ಲಾವಣೆ ಮಾಡುವುದು ಅಥವಾ ನೀತಿ ನಿರ್ಧಾರಗಳನ್ನು ಘೋಷಿಸುವುದಕ್ಕೆ ಅವಕಾಶ ಇಲ್ಲ. ಹಾಗಿದ್ದರೂ ಸಾಮಾನ್ಯ ಜನರು ಮತ್ತು ನೆರವು ಅಗತ್ಯ ಇರುವ ವಲಯಗಳಿಗೆ ಕೆಲವು ಕೊಡುಗೆಗಳನ್ನು ಚಿದಂಬರಂ ನೀಡಬಹುದು.
ಆರ್ಥಿಕ ಸುಧಾರಣಾ ಕ್ರಮಗಳಿಗೆ ಅವಕಾಶ ಇಲ್ಲದಿದ್ದರೂ, ಅರ್ಥವ್ಯವಸ್ಥೆ ಚೇತರಿಕೆಗೆ ಕ್ರಮ ಕೈಗೊಳ್ಳುವ ಸುಳಿವನ್ನು ಹಣಕಾಸು ಸಚಿವರು ನೀಡಿದ್ದಾರೆ. ಆದರೆ, ರಾಜಕೀಯ ಒಮ್ಮತದ ಕೊರತೆಯಿಂದಾಗಿ ಯಾವುದೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.
‘2004ರಲ್ಲಿ ಜಸ್ವಂತ್ ಸಿಂಗ್ 12 ಪುಟಗಳ ಮತ್ತು 2009ರಲ್ಲಿ ಪ್ರಣವ್ ಮುಖರ್ಜಿ 18 ಪುಟಗಳ ಮಧ್ಯಂತರ ಬಜೆಟ್ ಮಂಡಿಸಿದ್ದರು. ನಾನೀಗ 12 ರಿಂದ18ರೊಳಗಿನ ಸಂಖ್ಯೆಯನ್ನು ಆಯ್ದುಕೊಳ್ಳಬೇಕಿದೆ. ಕಾನೂನು ತಿದ್ದು ಪಡಿ ಅಗತ್ಯ ಇಲ್ಲದ ಯಾವುದೇ ಪ್ರಸ್ತಾಪ ಮಾಡಬಹುದು. ಭವಿಷ್ಯದ ದೃಷ್ಟಿ ಕೋನಗಳ ನೀಲನಕ್ಷೆ ಬಿಚ್ಚಿಡಬಹುದು’ ಎಂದು ಚಿದಂಬರಂ ಹೇಳಿದ್ದಾರೆ.
ಶ್ರೀಮಂತರ ತೆರಿಗೆಗೆ ಕೊನೆ?: ಅತಿ ಶ್ರೀಮಂತರಿಗೆ ವಿಧಿಸುತ್ತಿರುವ ತೆರಿಗೆಯನ್ನು ಮುಂದಿನ ವರ್ಷವೂ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಆದರೆ ಇದಕ್ಕೆ ಕಾನೂನು ತಿದ್ದುಪಡಿ ಅಗತ್ಯ ಇರುವುದರಿಂದ ಮುಂದುವರಿಸದಿರಲು ತೀರ್ಮಾನಿಸುವ ಸಾಧ್ಯತೆಯೇ ಹೆಚ್ಚು.
ವಾರ್ಷಿಕ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ವರಮಾನ ಉಳ್ಳವರಿಗೆ ಶೇ 10 ಹೆಚ್ಚುವರಿ ತೆರಿಗೆಯನ್ನು 2013–14ನೇ ಸಾಲಿನ ಬಜೆಟ್‌ನಲ್ಲಿ ವಿಧಿಸಲಾಗಿತ್ತು. ಇದು ಒಂದು ವರ್ಷಕ್ಕೆ ಸೀಮಿತ ಎಂದು ಕಳೆದ ವರ್ಷ ಹೇಳಲಾಗಿತ್ತು. ಈ ತೆರಿಗೆಯ ವ್ಯಾಪ್ತಿಯಲ್ಲಿ 42,800 ಜನರಿದ್ದಾರೆ.
ಸಾಧನೆಗಳ ವಿವರಣೆ ಸಾಧ್ಯತೆ
ಯುಪಿಎ ಸರ್ಕಾರದ ಸಾಧನೆಗಳನ್ನು ಬಣ್ಣಿಸಲು ಚಿದಂಬರಂ ಬಜೆಟ್ ಮಂಡನೆ ಅವಕಾಶ ಬಳಸಿಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ ಆರ್ಥಿಕ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅವರು ವಿವರಿಸುವ ಸಾಧ್ಯತ ಇದೆ.
2012–13ನೇ ಸಾಲಿನಲ್ಲಿ ಆರ್ಥಿಕ ವೃದ್ಧಿ ದರ ದಶಕದಲ್ಲಿಯೇ ಕನಿಷ್ಠ ಮಟ್ಟವಾದ ಶೇ 4.5ಕ್ಕೆ ಇಳಿಯಲು ಕಾರಣಗಳೇನು ಎಂಬುದನ್ನು ಚಿದಂಬರಂ ವಿವರಿಸಬಹುದು. ಅರ್ಥ ವ್ಯವಸ್ಥೆ ಪ್ರಗತಿಯನ್ನು ಮತ್ತೆ ಹಳಿಗೆ ತರುವುದಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಬಹುದು.
ವಿಮಾ ಮಸೂದೆ, ಸರಕು ಮತ್ತು ಸೇವಾ ತೆರಿಗೆ, ನೇರ ತೆರಿಗೆ ನೀತಿ ಸಂಹಿತೆ ಮುಂತಾದ ಪ್ರಮುಖ ಸುಧಾರಣಾ ಕ್ರಮಗಳಿಗೆ ಸರ್ಕಾರ ಕೈ ಹಾಕುವ ಸಾಧ್ಯತೆ ಇಲ್ಲ.
ವಿತ್ತೀಯ ಕೊರತೆಗೆ ಕಡಿವಾಣ
ವಿತ್ತೀಯ ಕೊರತೆಯು ಕಳೆದ ಬಜೆಟ್‌ನಲ್ಲಿ ಅಂದಾಜಿಸಿದ ಒಟ್ಟು ಆಂತರಿಕ ಉತ್ಪನ್ನದ ಶೇ 4.8ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ. ವೆಚ್ಚಕ್ಕೆ ಕಡಿವಾಣ ಹಾಕಿರುವುದು ಮತ್ತು 2ಜಿ ತರಂಗಾಂತರ ಹಂಚಿಕೆಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿರುವುದು ಇದಕ್ಕೆ ಕಾರಣ.
ಸರ್ಕಾರ ಹಾಕಿಕೊಂಡಿರುವ ಆರ್ಥಿಕ ನೀತಿಗೆ ಅನುಗುಣವಾಗಿ 2014–15ನೇ ಸಾಲಿನಲ್ಲಿಯೂ ವಿತ್ತೀಯ ಕೊರತೆ ಒಟ್ಟು ಆಂತರಿಕ ಉತ್ಪನ್ನದ ಶೇ 4.2 ಮೀರದಂತೆ ನೋಡಿಕೊಳ್ಳಬೇಕು.
ವಿತ್ತೀಯ ಕೊರತೆಗೆ ಲಕ್ಷ್ಮಣ ರೇಖೆ ಹಾಕಿಕೊಂಡಿದ್ದು ಅದನ್ನು ಮೀರುವ ಪ್ರಶ್ನೆಯೇ ಇಲ್ಲ ಎಂದು ಚಿದಂಬರಂ ಹಲವು ಬಾರಿ ಹೇಳಿದ್ದಾರೆ.
2013–14ನೇ ಸಾಲಿನಲ್ಲಿ ಚಾಲ್ತಿ ಖಾತೆ ಕೊರತೆ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಇದು ಮುಂದಿನ ವರ್ಷ ಸುಮಾರು ₨ 3 ಲಕ್ಷ ಕೋಟಿ ಅಥವಾ ಒಟ್ಟು ಆಂತರಿಕ ಉತ್ಪನ್ನದ ಶೇ 2.5ರೊಳಗೆ ಬರಬಹುದೆಂದು ಅಂದಾಜಿಸಲಾಗಿದೆ. 2012–13ರಲ್ಲಿ ಇದು ₨ 5.5 ಲಕ್ಷ ಕೋಟಿಯಷ್ಟಿತ್ತು. ಜೂನ್–ಜುಲೈಯಲ್ಲಿ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.