ADVERTISEMENT

ಚುನಾವಣಾ ಆಯೋಗಕ್ಕೆ ಸವಾಲು: ಖುರ್ಷಿದ್, ಬೇಣಿ, ಸರದಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಫರೂಕಾಬಾದ್ (ಉತ್ತರ ಪ್ರದೇಶ) (ಪಿಟಿಐ):  ಮುಸ್ಲಿಮರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಾದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಪ್ರಕರಣ ತಣ್ಣಗಾಗುವ ಮೊದಲೇ, ಮತ್ತೊಬ್ಬ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮ ಮತ್ತದೇ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ಸವಾಲು ಎಸೆಯುವ ಮೂಲಕ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ.

ಕೈಮ್‌ಗಂಜ್‌ನಲ್ಲಿ ಬುಧವಾರ ರಾತ್ರಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡಿದ ಅವರು, `ಮುಸ್ಲಿಮರಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು~ ಎಂದು ಒತ್ತಾಯಿಸಿದ್ದಾರೆ. `ಒಂದು ವೇಳೆ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ನೀಡುವುದಾದರೆ ನೀಡಲಿ~ ಎಂದೂ ಆಯೋಗಕ್ಕೆ ನೇರ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

`ಮುಸ್ಲಿಮರಿಗಾಗಿ ಖುರ್ಷಿದ್ ಪ್ರಾಮಾಣಿಕವಾಗಿ ಹೋರಾಟ ನಡೆಸಿದ್ದಾರೆ~ ಎಂದು ಶ್ಲಾಘಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಖುರ್ಷಿದ್ ಅವರ ಉಪಸ್ಥಿತಿಯಲ್ಲಿಯೇ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದರು. ಆದರೆ, ಕಾಂಗ್ರೆಸ್ ಪಕ್ಷ ಸಚಿವರ ಈ ಹೇಳಿಕೆಯನ್ನು ಒಪ್ಪಿಕೊಂಡಿಲ್ಲ. `ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸಬೇಕು~ ಎಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.

ತಿರುಗಿಬಿದ್ದ ಟಿಎಂಸಿ: ಸಚಿವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಗುರುವಾರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಸ್.ವೈ.ಖುರೇಷಿ ಅವರನ್ನು ಭೇಟಿಯಾದ ಕೇಂದ್ರ ಪ್ರವಾಸೋದ್ಯಮ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಸುಲ್ತಾನ್ ಅಹಮದ್ ವಿಷಯವನ್ನು ಆಯೋಗದ ಗಮನಕ್ಕೆ ತಂದರು. 

ಬೇಣಿ ಅವರಿಗೆ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ ಅವರು, ಒಳ ಮೀಸಲಾತಿ ಪ್ರಸ್ತಾಪಿಸುತ್ತಿರುವ ಕಾಂಗ್ರೆಸ್ ಹೇಳಿಕೆಗಳು ರಾಜಕೀಯ ಸಂಚಿನ ಭಾಗ ಎಂದು ಆರೋಪಿಸಿದರು.

ಅದು ಮುಸ್ಲಿಮರಿಗೆ ಒಳ ಮೀಸಲಾತಿ ಎಂಬ `ಲಾಲಿಪಾಪ್~ ಆಸೆ ತೋರಿಸಿ ವಂಚಿಸುತ್ತಿದೆ ಎಂದು ಟೀಕಿಸಿದರು.
ಈ ನಡುವೆ ಜಾಗೃತಗೊಂಡ ಚುನಾವಣಾ ಆಯೋಗ, ಸಚಿವರು ನೀಡಿರುವ ಹೇಳಿಕೆ ಮತ್ತು ಅದು ನೀತಿ ಸಂಹಿತೆಯ ಉಲ್ಲಂಘನೆಯಾಗುವುದೇ ಎಂಬ ಪರಿಶೀಲನೆಗೆ ಮುಂದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.