ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್, ಚುನಾವಣಾ ಆಯುಕ್ತರಾದ ಎಚ್.ಎಸ್. ಬ್ರಹ್ಮ ಮತ್ತು ಎಸ್.ಎನ್.ಎ. ಜೈದಿ ನವದೆಹಲಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಲಿದ್ದಾರೆ.
ವೇಳಾಪಟ್ಟಿ ಪ್ರಕಟವಾದ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ.
15ನೇ ಲೋಕಸಭೆಯ ಅವಧಿ ಮೇ 31ರಂದು ಕೊನೆಗೊಳ್ಳಲಿದೆ. ಜೂನ್ 1ರ ಮೊದಲು ಹೊಸ ಲೋಕಸಭೆ ರಚನೆಯಾಗಬೇಕಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಎರಡು ತಿಂಗಳ ಅವಧಿಯಲ್ಲಿ ಹಲವು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 2009ರ ಲೋಕಸಭೆ ಚುನಾವಣೆ ಐದು ಹಂತಗಳಲ್ಲಿ ನಡೆದಿತ್ತು. ಆದರೆ, ಈ ಬಾರಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್‌ಪೀಡಿತ ರಾಜ್ಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಚುನಾವಣೆ ನಡೆಸಲು ಹಲವು ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ.
ಆಸ್ಸಾಂ, ಒಡಿಶಾ ಮತ್ತು ಹೊಸದಾಗಿ ರಚನೆಯಾಗಿರುವ ತೆಲಂಗಾಣವೂ ಸೇರಿರುವ ಆಂಧ್ರಪ್ರದೇಶ ವಿಧಾನಸಭೆಗಳ ಚುನಾವಣಾ ವೇಳಾಪಟ್ಟಿಯನ್ನೂ ಆಯೋಗ ಪ್ರಕಟಿಸುವ ನಿರೀಕ್ಷೆ ಇದೆ. ಈ ಮೂರೂ ರಾಜ್ಯಗಳಲ್ಲಿ ಲೋಕಸಭೆ ಜೊತೆಗೇ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.