ಹೈದರಾಬಾದ್: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಜೈಲು ಸೇರಿರುವ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ಬುಧವಾರ ಹೈ ಕೋರ್ಟ್ ತಿರಸ್ಕರಿಸಿದೆ.
ಜಗನ್ ಪರ ವಕೀಲರು ಜೂನ್ 21ರಂದು ಜಾಮೀನಿಗಾಗಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ನಡುವೆ, ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಇದೇ 18ರವರೆಗೆ ವಿಸ್ತರಿಸಿದೆ. ಮುಂದಿನ ವಿಚಾರಣೆಯನ್ನೂ ಚಂಚಲಗುಡ ಜೈಲಿನಲ್ಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಡಿಸಿದೆ.
`ಪ್ರಕರಣ ತನಿಖೆ ಮಹತ್ವದ ಘಟ್ಟ ತಲುಪಿದ್ದು, ಜಗನ್ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಜಾಮೀನು ನೀಡಬಾರದು~ ಎಂಬ ಸಿಬಿಐ ವಾದವನ್ನು~ ಕೋರ್ಟ್ ಒಪ್ಪಿಕೊಂಡಿದೆ. ಇದೇ ಸಂದರ್ಭದಲ್ಲಿ, ಜಗನ್ ಈ ಹಿಂದೆ ಸಾಕ್ಷ್ಯಗಳನ್ನು ನಾಶಪಡಿಸಿದ್ದರು ಎಂಬುದಕ್ಕೆ ಸಿಬಿಐ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದೂ ಕೋರ್ಟ್ ಹೇಳಿದೆ.
ಜಗನ್ ಪರ ವಕೀಲ ರಾಂ ಜೇಠ್ಮಲಾನಿ, `ತಮ್ಮ ಕಕ್ಷಿದಾರಪಕ್ಷವೊಂದರ ಅಧ್ಯಕ್ಷರು ಹಾಗೂ ಸಂಸದರಾಗಿದ್ದಾರೆ. ಅವರು ಸಾಕ್ಷ್ಯ ನಾಶಪಡಿಸುವುದಿಲ್ಲ. ತನಿಖೆಗೆ ಸಹಕರಿಸುತ್ತಾರೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಮಂಗಳವಾರ, ಸಿಬಿಐ ಜಗನ್ ವಿರುದ್ಧ ನಾಲ್ಕನೇ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಪ್ರಧಾನಿ ಭೇಟಿ: ಜಗನ್‌ಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿರುವ ಬೆನ್ನಲ್ಲೇ ಅವರ ತಾಯಿ ವೈಎಸ್‌ಆರ್ ಕಾಂಗ್ರೆಸ್‌ನ ಗೌರವಾಧ್ಯಕ್ಷೆ ವಿಜಯಮ್ಮ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬುಧವಾರ ಭೇಟಿಯಾಗಿ, ತಮ್ಮ ಮಗನಿಗೆ ತನಿಖೆ ನೆಪದಲ್ಲಿ ಸಿಬಿಐ ನವರು ಹಿಂಸೆ ನೀಡುತ್ತಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರಿಂದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿಯಾದ ಅವರು, ಜಗನ್ ಬಂಧನದ ಸುತ್ತ ನಡೆದಿರುವ ಘಟನೆಗಳನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.