ADVERTISEMENT

ಜನವರಿಯಲ್ಲಿ ವಿಜ್ಞಾನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಕೋಲ್ಕತ್ತ (ಪಿಟಿಐ): ಭಾರತೀಯ ವಿಜ್ಞಾನ ಸಮಾವೇಶದ ಶತಮಾನೋತ್ಸವ ಸಂಭ್ರಮ ಆಚರಣೆಗಾಗಿ ಇಲ್ಲಿನ ಸಾಲ್ಟ್‌ಲೇಕ್ ನಗರ ಸಜ್ಜಾಗುತ್ತಿದೆ.

2013ರ ಜನವರಿ 3ರಂದು ಇಲ್ಲಿನ ಸಾಲ್ಟ್ ಲೇಕ್ ಕೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ  ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ವಿಶ್ವದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಎಂಟು ಮಂದಿ ಸೇರಿದಂತೆ 70 ಖ್ಯಾತ ವಿಜ್ಞಾನಿಗಳು ಹಾಗೂ ವಿವಿಧ ರಂಗಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ `ಭವಿಷ್ಯದಲ್ಲಿ ವಿಜ್ಞಾನ ಹೇಗೆ ದೇಶವನ್ನು ರೂಪಿಸಬಹುದು~ ಎಂಬ ವಿಷಯ ಕುರಿತು ಚರ್ಚಿಸಲಾಗುತ್ತದೆ.

ಐದು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ವೈವಿಧ್ಯಮಯ ವಿಜ್ಞಾನದ ಕಾರ್ಯಕ್ರಮಗಳು ನಡೆಯಲಿವೆ. ಈ ಮೂಲಕ `ಐಟಿ ಹಬ್~ ಆಗಿರುವ ಲೇಕ್‌ಸಿಟಿ `ವಿಜ್ಞಾನ ಗ್ರಾಮ~ವಾಗಿ ಪರಿವರ್ತನೆಯಾಗಲಿದೆ.

ಕೋಲ್ಕತ್ತ ವಿಶ್ವವಿದ್ಯಾಲಯ ಈ ಕಾರ್ಯಕ್ರಮದ ಆತಿಥ್ಯ ವಹಿಸಿಕೊಂಡಿದೆ. ಸಾಲ್ಟ್ ಲೇಕ್ ಆವರಣ, ಎನ್.ಎಸ್ ಬೋಸ್ ರಾಷ್ಟ್ರೀಯ ಮೂಲ ವಿಜ್ಞಾನಗಳ ಕೇಂದ್ರ, ಅಖಿಲ ಭಾರತ ಶುಚಿತ್ವ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ, ಜಾಡವ್‌ಪುರ  ವಿಶ್ವವಿದ್ಯಾಲಯ, ಶಹಾ ಅಣು ಭೌತಶಾಸ್ತ್ರ ಸಂಸ್ಥೆ ಮತ್ತು ಟೆಕ್ನೊ ಇಂಡಿಯಾ ಕಾಲೇಜ್ ಕೂಡ ಆತಿಥ್ಯದ ಜವಾಬ್ದಾರಿಯನ್ನು ಹಂಚಿಕೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.