ADVERTISEMENT

ಜರ್ಮನ್ ಬೇಕರಿ ಸ್ಫೋಟ ಪ್ರಕರಣ; ತಜ್ಞರ ನಡುವೆ ಮೊಬೈಲ್‌ಫೋನ್ ಭಿನ್ನತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 15:55 IST
Last Updated 20 ಫೆಬ್ರುವರಿ 2011, 15:55 IST

ಮುಂಬೈ/ ಪುಣೆ, (ಪಿಟಿಐ):  ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಟಿಎಸ್ ಮತ್ತು ವಿಧಿವಿಜ್ಞಾನ ತಜ್ಞರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸ್ಫೋಟಕ್ಕೆ ಮೊಬೈಲ್ ಫೋನ್ ಅಲಾರಾಂ ಬಳಸಲಾಗಿತ್ತು ಎಂದು ಎಟಿಎಸ್ ತಿಳಿಸಿದ್ದರೆ, ಘಟನೆ ನಡೆದ ಸ್ಥಳದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಹುಡುಕುತ್ತಿರುವ ಮೋಹ್ಸಿನ್ ಚೌಧರಿ, ಯಾಸೀನ್ ಭಟ್ಕಳ್ ಹಾಗೂ ಬಂಧನಕ್ಕೊಳಗಾಗಿರುವ ಆರೋಪಿ ಹಿಮಾಯತ್ ಬೇಗ್ ಮುಂಬೈಗೆ ತೆರಳಿ ಅಲ್ಲಿಂದ ನೋಕಿಯಾ 1100 ಮೊಬೈಲ್ ಹಾಗೂ ದೊಡ್ಡ ಗೋಣಿಚೀಲವನ್ನು ಖರೀದಿಸಿ ಅದನ್ನೇ ಸ್ಫೋಟಕ್ಕೆ ಬಳಸಿದ್ದರು ಎಂದು ಎಟಿಎಸ್ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಬಾಂಬ್ ಅನ್ನು ಗೋಣಿಚೀಲದೊಳಗಿಟ್ಟ ಬಳಿಕ ಅದನ್ನು 2010 ಫೆಬ್ರುವರಿ 3ರಂದು 5 ಗಂಟೆಯ ವೇಳೆಗೆ ಬೇಕರಿ ಒಳಗೆ ಇಡಲಾಗಿತ್ತು. 6.50ರ ವೇಳೆಗೆ ಬಾಂಬ್ ಸ್ಫೋಟಗೊಂಡಿತು.

ಈ ಸ್ಫೋಟದಲ್ಲಿ 17 ಜನರು ಸತ್ತು 56 ಮಂದಿ ಗಾಯಗೊಂಡಿದ್ದರು ಎಂದು ಎಟಿಎಸ್ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ಆದರೆ ಇದನ್ನು ಸ್ಪಷ್ಟಪಡಿಸಲು ಸ್ಫೋಟ ನಡೆದ ಸ್ಥಳದಿಂದ ಮೊಬೈಲ್ ಫೋನ್ ದೊರೆತ ಬಗ್ಗೆ ವಿಧಿವಿಜ್ಞಾನ ಪರೀಕ್ಷೆಯ ವೇಳೆ ತಿಳಿದುಬಂದಿಲ್ಲ ಎನ್ನುವುದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ನೀಡುವಂತೆ ವಿವಿಧ ತನಿಖಾ ಸಂಸ್ಥೆಗಳು ಎಟಿಎಸ್‌ಗೆ ಪದೇ ಪದೇ ಕೇಳಿಕೊಂಡಿತು.
ಇದೇ 22ರೊಳಗಾಗಿ ಹೊಸ ದಾಖಲೆಗಳನ್ನು ಸಲ್ಲಿಸುವುದಾಗಿ    ಎಟಿಎಸ್ ಪುಣೆ ನ್ಯಾಯಾಲಯಕ್ಕೆ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.