ADVERTISEMENT

ಜಾಮೀನಿಗೆ ‘ಸುಪ್ರೀಂ’ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ನವದೆಹಲಿ: ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್‌ ಕರೀಂ ಲಾಲ ತೆಲಗಿಗೆ ಕಾರಾಗೃಹದಿಂದಲೇ ಕಾರ್ಯಾಚರಣೆ ನಡೆಸಲು ನೆರವು ನೀಡಿರುವ ಆರೋಪದಲ್ಲಿ ಹೈಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಕಾರಾಗೃಹದ ಹಿಂದಿನ ಅಧೀಕ್ಷಕ ಹಾಗೂ ಅವರ ಸಹಾಯಕನಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಕಾರಾಗೃಹ ವಾಸದಲ್ಲಿದ್ದ ತೆಲಗಿಗೆ ಛಾಪಾ ಕಾಗದ ಮುದ್ರಿಸಲು ನೆರವು ನೀಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವಿಚಾರಣೆ ಅಗತ್ಯವಿದ್ದು, ಏಪ್ರಿಲ್‌ 3ರಿಂದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಒಳಗೊಂಡ ಪೀಠ ತಿಳಿಸಿತು.

ಕಾರಾಗೃಹ ಅಧೀಕ್ಷಕರಾಗಿದ್ದ ಪಿ.ಎನ್‌. ಜಯಸಿಂಹ ಹಾಗೂ ಅವರ ಸಹಾಯಕ ನಂಜಪ್ಪ ಅವರು ಈಗಾಗಲೇ 3 ವರ್ಷ 11 ತಿಂಗಳು ಕಾರಾಗೃಹದಲ್ಲೇ ಕಳೆದಿದ್ದಾರೆ. ಇನ್ನುಳಿದ ಅವಧಿಯ ಶಿಕ್ಷೆಯನ್ನು ಇಳಿಸಬೇಕು ಎಂದು ಅವರ ಪರ ವಕೀಲ ಬಸವಪ್ರಭು ಪಾಟೀಲ ನ್ಯಾಯಪೀಠಕ್ಕೆ ಮನವಿ ಮಾಡಿದರು.

ADVERTISEMENT

ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ 2000ರಲ್ಲಿ ಸಿಬಿಐ ದಾಖಲಿಸಿದ್ದ ಈ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು 2010ರ ಸೆಪ್ಟೆಂಬರ್‌ 14ರಂದು ಈ ಇಬ್ಬರೂ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ, ಹೈಕೋರ್ಟ್‌ ಆ ಆದೇಶ ರದ್ದುಪಡಿಸಿತ್ತು.

ಕಾರಾಗೃಹದಲ್ಲೇ ತೆಲಗಿಗೆ ನೆರವು ನೀಡುವ ಮೂಲಕ ಭ್ರಷ್ಟಾಚಾರ ನಿಷೇಧ ಕಾಯ್ದೆಯ ಸೆಕ್ಷನ್‌ 13ನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದ ಹೈಕೋರ್ಟ್‌ 2017ರ ಆಗಸ್ಟ್‌ 3ರಂದು ಇಬ್ಬರಿಗೂ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.