ADVERTISEMENT

ಜೆಡಿಯು ಮಹತ್ವದ ಸಭೆ ಇಂದು

ಉಪ ಮುಖ್ಯಮಂತ್ರಿ ತೇಜಸ್ವಿ ರಾಜೀನಾಮೆಗೆ ಗಡುವು ಅಂತ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST
ಜೆಡಿಯು ಮಹತ್ವದ ಸಭೆ ಇಂದು
ಜೆಡಿಯು ಮಹತ್ವದ ಸಭೆ ಇಂದು   

ಪಟ್ನಾ/ನವದೆಹಲಿ: ಭ್ರಷ್ಟಾಚಾರ  ಆರೋಪದ ಬಗ್ಗೆ ವಿವರಣೆ ನೀಡುವಂತೆ   ಇಲ್ಲವೇ   ರಾಜೀನಾಮೆ ಸಲ್ಲಿಸುವಂತೆ ಜೆಡಿಯು ಪಕ್ಷವು  ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ನೀಡಿದ್ದ ಗಡುವು ಶನಿವಾರ ಸಂಜೆ ಮುಗಿದಿದೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಸಂಜೆ ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಈ ತಿಂಗಳ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದ್ದರೂ ನಿತೀಶ್ ಈ ಸಂದರ್ಭ  ಬಳಸಿಕೊಂಡು ರಾಜಕೀಯ ತಂತ್ರ ರೂಪಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಭ್ರಷ್ಟಾಚಾರ ಆಪಾದನೆ ಹೊತ್ತವರು ಸಚಿವರಾಗಿ ಮುಂದುವರಿಯಬಾರದು ಎಂಬ ತಮ್ಮ ನಿಲುವಿಗೆ  ನಿತೀಶ್  ಅಂಟಿಕೊಂಡಿರುವುದು ಬಿಕ್ಕಟ್ಟು ಬಿಗಡಾಯಿಸಲು ಕಾರಣ ಎನ್ನಲಾಗಿದೆ.

ಈ ಮಧ್ಯೆ ಜೆಡಿಯು ಮುಖ್ಯ ವಕ್ತಾರ ಸಂಜಯ್ ಸಿಂಗ್, ‘ನಮ್ಮ  ನಾಯಕ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ಜತೆ ರಾಜಿ ಮಾಡಿಕೊಳ್ಳು
ವುದಿಲ್ಲ ಎನ್ನುವುದು ಗೋಡೆ ಬರಹದಷ್ಟೇ ಸ್ಪಷ್ಟ . ಇದನ್ನು ಲಾಲು ಪ್ರಸಾದ್‌ ನೆನಪಿಟ್ಟುಕೊಳ್ಳಬೇಕು’ ಎಂದು ಹೇಳಿರುವುದು  ಬಿಕ್ಕಟ್ಟು ಶಮನದ ಸಾಧ್ಯತೆಯನ್ನು ಕ್ಷೀಣವಾಗಿಸಿದೆ.

‘ಯಾವುದೇ ಒತ್ತಡಕ್ಕೆ ಮಣಿದು ತೇಜಸ್ವಿ  ರಾಜೀನಾಮೆ ಕೊಡಬಾರದು ಎಂಬ ಆರ್‌ಜೆಡಿ ಶಾಸಕಾಂಗ ಪಕ್ಷದ ಸಭೆಯ ನಿರ್ಧಾರಕ್ಕೆ  ಬದ್ಧ’ ಎಂದು ಆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಸಂಜೆ ರಾಂಚಿಯಿಂದ ಮರಳಿದ ನಂತರ ಪಕ್ಷದ ಮುಖಂಡರ ಜತೆ ತುರ್ತು ಸಭೆ ನಡೆಸಿದ ಅವರು, ‘ಎಫ್‌ಐಆರ್ ದಾಖಲಾಗಿದೆ ಎಂದ ಮಾತ್ರಕ್ಕೆ ತಮ್ಮ ಪುತ್ರ ತೇಜಸ್ವಿ  ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದು  ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ತೇಜಸ್ವಿ ಬೆಂಬಲಕ್ಕೆ  ಜೆಡಿಯು ಮುಖಂಡರು

ಭ್ರಷ್ಟಾಚಾರದ ಆಪಾದನೆ ಎದುರಿಸುತ್ತಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ರಾಜೀನಾಮೆಗೆ ಒತ್ತಾಯಿಸದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಅವರ ಪಕ್ಷದ ಮುಖಂಡರೇ ಒತ್ತಡ ಹೇರುತ್ತಿದ್ದಾರೆ.

ಈ ದಿಢೀರ್‌ ಬೆಳವಣಿಗೆಯಿಂದ ಬಿಹಾರ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆಯುವ ಸಾಧ್ಯತೆ ಇದೆ. ‘ತೇಜಸ್ವಿ ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ ಎಂಬ ಒಂದೇ ಕಾರಣಕ್ಕೆ ಅವರ ರಾಜೀನಾಮೆಗೆ ಒತ್ತಾಯಿಸುವುದು ವಿವೇಕದ ನಿರ್ಧಾರವಲ್ಲ’ ಎಂದು ಶರದ್ ಯಾದವ್ ಎಚ್ಚರಿಕೆ ನೀಡಿದ್ದಾರೆ. ಪಕ್ಷದ  ಕೆಲವು  ಮುಖಂಡರು ಇದಕ್ಕೆ ಧ್ವನಿಗೂಡಿಸಿದ್ದಾರೆ.

ನಿತೀಶ್ ನಿಲುವು ಬದಲಿಸದೇ ಇದ್ದರೆ ಲಾಲು ಜೆಡಿಯು ಒಡೆಯುವ ತಂತ್ರ ಅನುಸರಿಸಬಹುದು ಎಂದು ಎಲ್‌ಜೆಪಿ ಮುಖಂಡ ರಾಂ ವಿಲಾಸ್ ಪಾಸ್ವಾನ್ ಸುಳಿವು ನೀಡಿದ್ದಾರೆ.

ಸೋನಿಯಾ ರಂಗ ಪ್ರವೇಶ: ಈ ಮಧ್ಯೆ ಬಿಕ್ಕಟ್ಟನ್ನು ಶಮನ ಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ರಂಗಪ್ರವೇಶ ಮಾಡಿದ್ದಾರೆ. ಜೆಡಿಯು ಮತ್ತು ಆರ್‌ಜೆಡಿ ಹದಗೆಡುತ್ತಿರುವ ಸಂಬಂಧ ಸರಿಪಡಿಸಿ, ಪರಿಸ್ಥಿತಿ ತಿಳಿಗೊಳಿಸಲು ಸೋನಿಯಾ ಅವರು ನಿತೀಶ್ ಮತ್ತು ಲಾಲು ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಉಪ ರಾಷ್ಟ್ರಪತಿ ಸ್ಥಾನಕ್ಕೆ  ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಗೋಪಾಲ್ ಕೃಷ್ಣ ಗಾಂಧಿ ಅವರ ಆಯ್ಕೆ  ಬೆಂಬಲಿಸಿದ್ದಕ್ಕೆ ಧನ್ಯವಾದ ಹೇಳಲು ಸೋನಿಯಾ ಅವರು  ನಿತೀಶ್‌ಗೆ ಫೋನ್ ಮಾಡಿದ್ದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರವನ್ನು ಹಣಿಯಲು ಎಲ್ಲಾ ವಿರೊಧ ಪಕ್ಷಗಳು ಒಂದಾಗಬೇಕು ಎಂದು ಸೋನಿಯಾ ಮನವಿ ಮಾಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಹಾರದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಸೋನಿಯಾ ಅವರು ಹೆಚ್ಚಿಗೆ ಮಾತನಾಡಲಿಲ್ಲ ಎಂದೂ ಈ ಮೂಲಗಳು ತಿಳಿಸಿವೆ. ‘ಸೋನಿಯಾ ಗಾಂಧಿ ಅವರು ಇನ್ನೂ  ನನ್ನ ಜತೆ  ಮಾತನಾಡಿಲ್ಲ’ ಎಂದು ಲಾಲು ಹೇಳಿದ್ದಾರೆ.

ಬಿಹಾರ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಚೌಧರಿ ಕೂಡ  ನಿತೀಶ್  ಮತ್ತು ಲಾಲು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿದ್ದಾರೆ.

ಜೆಡಿಯು ಒತ್ತಾಯ:  ‘ಉಪ ಮುಖ್ಯಮಂತ್ರಿ  ತೇಜಸ್ವಿ ಯಾದವ್ ಅವರ ಆದಾಯದ ಮೂಲ ಯಾವುದು ಮತ್ತು ಅವರ ವಿರುದ್ಧ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಹೊಂದಿದ ಆಪಾದನೆ ಹೇಗೆ ಬಂದಿದೆ ಎಂಬುದನ್ನು ವಿವರಿಸಲಿ’ ಎಂದು ಜೆಡಿಯು ಶನಿವಾರ ಆರ್‌ಜೆಡಿ ಮುಖ್ಯಸ್ಥ  ಲಾಲು ಪ್ರಸಾದ್ ಅವರನ್ನು  ಒತ್ತಾಯಿಸಿದೆ.

‘ಇದೊಂದು ದೊಡ್ಡ ವಿಚಾರವೇನು ಅಲ್ಲ, ನೀವು (ತೇಜಸ್ವಿ) ಏನೂ ತಪ್ಪು ಮಾಡದಿದ್ದರೆ ಆದಾಯದ ಮೂಲದ ಸಂಪೂರ್ಣ ವಿವರ ನೀಡುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿ, ಅವರ ಬಾಯಿ ಮುಚ್ಚಿಸಿ’ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ.

ತೇಜಸ್ವಿ ದೂರ
ಪಟ್ನಾ:
ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿದ್ದ ಕಾರ್ಯ ಕ್ರಮದಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗೈರು ಹಾಜರಿದ್ದರು.

ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಸರ್ಕಾರ ಆರಂಭಿಸಿರುವ ‘ಕುಶಲ ಯುವ ಕಾರ್ಯಕ್ರಮ’ದ ಮೊದಲ ವಾರ್ಷಿ ಕೋತ್ಸವ ಅಂಗವಾಗಿ ಜ್ಞಾನ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತೇಜಸ್ವಿ ಅವರು ಕಾರ್ಯಕ್ರಮದ ಗೌರವ ಅತಿಥಿ ಆಗಿದ್ದರು. ಆದರೆ, ಅವರು ಸಮಾರಂಭದಿಂದ ದೂರ ಉಳಿದಿದ್ದರು. ಈ ಮೂಲಕ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ ಎಂಬ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.