ADVERTISEMENT

`ಟಿವಿ 18' ಸುದ್ದಿವಾಹಿನಿಗಳ ವಿರುದ್ಧ ಛೀಮಾರಿ

ಎನ್‌ಬಿಎ ನಿಯಮ ಉಲ್ಲಂಘನೆ: ಲಕ್ಷ ರೂಪಾಯಿ ದಂಡ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): `ಟಿವಿ18' ಬ್ರಾಡ್‌ಕಾಸ್ಟ್ ಲಿಮಿಟೆಡ್ ಸಂಸ್ಥೆ ನಡೆಸುವ ಸಿಎನ್‌ಎನ್-ಐಬಿಎನ್ ಮತ್ತು ಹಿಂದಿ ಆವೃತ್ತಿಯ ಐಬಿಎನ್7 ವಾಹಿನಿಗಳು ರಾಜೀವ್‌ಗಾಂಧಿ ಚಾರಿಟೆಬಲ್ ಟ್ರಸ್ಟ್ (ಆರ್‌ಜಿಸಿಟಿ) ಕುರಿತು  ಪೂರ್ವಗ್ರಹ ಪೀಡಿತ ವರದಿಗಳನ್ನು ಬಿತ್ತರಿಸುವ ಮೂಲಕ ಎನ್‌ಬಿಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾರ್ತಾ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್‌ಎ) ಛೀಮಾರಿ ಹಾಕಿದೆ.

ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರು ನೀಡಿದ ಆದೇಶದಲ್ಲಿ ` ಈ ಎರಡೂ ವಾಹಿನಿಗಳು ಕ್ಷಮಾಪಣೆಯನ್ನು ಪ್ರಸಾರ ಮಾಡಬೇಕು. ಜತೆಗೆ ವಾರ್ತಾ ಪ್ರಸಾರ ಸಂಘಕ್ಕೆ (ಎನ್‌ಬಿಎ)ಗೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ವಾಹಿನಿಗಳು ಎನ್‌ಬಿಎ ನೀತಿ ನಿಯಮಗಳು ಹಾಗೂ ಪ್ರಸಾರದ ಮಾನದಂಡಗಳನ್ನು ಉಲ್ಲಂಘಿಸಿವೆ. ವಿಶೇಷವಾಗಿ ವಾರ್ತಾ ಪ್ರಸಾರದ ಮಾನದಂಡಗಳಾದ ನಿಖರತೆ, ನಿಷ್ಪಕ್ಷಪಾತ, ತಟಸ್ಥ ಹಾಗೂ ಸುದ್ದಿ ಬಿತ್ತರಕ್ಕೆ ಮುನ್ನ ಮಾಹಿತಿಯನ್ನು ತಾಳೆ ನೋಡುವುದು, ಸುದ್ದಿಗೆ ಸಂಬಂಧಪಟ್ಟ ವ್ಯಕ್ತಿಯ ಅಭಿಪ್ರಾಯ ಸಂಗ್ರಹ ಸೇರಿದಂತೆ ಹಲವು ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಎನ್‌ಬಿಎಸ್‌ಎ ತಿಳಿಸಿದೆ.

ಗುಡಗಾಂವ್‌ನಲ್ಲಿ ಆರ್‌ಜಿಸಿಟಿ ಟ್ರಸ್ಟ್ ನಿರ್ಮಿಸಲು ಉದ್ದೇಶಿಸಿದ್ದ ನೇತ್ರ ಆಸ್ಪತ್ರೆಗಾಗಿ ಜಮೀನು ನೀಡುವ ಕುರಿತು ಈ ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು. ಈ ಸಂಬಂಧ ವಾಹಿನಿಯ ವಿರುದ್ಧ ಆರ್‌ಜಿಸಿಟಿ  ಆಗಸ್ಟ್ 1, 2011ರಂದು ಎನ್‌ಬಿಎಸ್‌ಎ ದೂರು ನೀಡಿತ್ತು. ದೂರಿನ ಅನ್ವಯ ಪ್ರಾಧಿಕಾರ ಈ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.