ADVERTISEMENT

ಟ್ರೈವ್ಯಾಲಿ ವಿವಿಯ ಆಮಿಷ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 16:30 IST
Last Updated 3 ಫೆಬ್ರುವರಿ 2011, 16:30 IST

ಹೈದರಾಬಾದ್ (ಪಿಟಿಐ):  ಕಡಿಮೆ ಶಿಕ್ಷಣ ಶುಲ್ಕ ಮತ್ತು ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂಬ ಆಮಿಷಕ್ಕೆ ಒಳಗಾಗಿ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಲಸೆ ಮತ್ತು ಸುಂಕ ನಿರ್ದೇಶನಾಲಯ ಮುಚ್ಚಿಸಿರುವ ಕ್ಯಾಲಿಫೋರ್ನಿಯಾ ಮೂಲದ ಟ್ರೈ ವ್ಯಾಲಿ ವಿಶ್ವವಿದ್ಯಾಲಯ (ಟಿವಿಯು)ದಲ್ಲಿ ಪ್ರವೇಶ ಪಡೆಯಲು ಪ್ರಮುಖವಾ ಕಾರಣಗಳು ಎಂದು ಶಿಕ್ಷಣ ಸಲಹಾಕಾರರು ತಿಳಿಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಅಕ್ರಮವಾಗಿ ವಿದ್ಯಾರ್ಥಿ ವೀಸಾ ಪಡೆದು ವಲಸೆ ನಿಯಮವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಟ್ರೈ ವ್ಯಾಲಿ ವಿಶ್ವವಿದ್ಯಾಲಯವನ್ನು ಮುಚ್ಚಿಸಲಾಗಿದ್ದು, ಭಾರತೀಯ ವಿದ್ಯಾರ್ಥಿಗಳು ಅಮೆರಿಕದಿಂದ ಹೊರಬರಬೇಕಾದ ಭೀತಿಯನ್ನು ಎದುರಿಸುತ್ತಿದ್ದಾರೆ.

ಅಮೆರಿಕದ ವಲಸೆ ಇಲಾಖೆಯ ಅಧಿಕಾರಿಗಳ ಪ್ರಕಾರ ಶೇ 95ರಷ್ಟು  ಭಾರತೀಯ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ ಮೋಸಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಆಂಧ್ರ ಪ್ರದೇಶ ಮೂಲದವರು.

ಶಿಕ್ಷಣ ಮಧ್ಯವರ್ತಿ ಸಂಸ್ಥೆ ಐಎಇಸಿ ಸಲಹಾಕಾರರ ಪ್ರಕಾರ ಕಡಿಮೆ ಶಿಕ್ಷಣ ಶುಲ್ಕದ ಹಿನ್ನೆಲೆಯಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಈ ವಿವಿಯಲ್ಲಿ ಪ್ರವೇಶ ಪಡೆದಿದ್ದರು. ವಿಶ್ವವಿದ್ಯಾಲಯವು ಪ್ರತಿವರ್ಷ 15,000 ದಿಂದ 20,000 ಅಮೆರಿಕನ್ ಡಾಲರ್ ಶಿಕ್ಷಣ ಶುಲ್ಕ ಪಡೆಯುತ್ತಿತ್ತು. ಇದು ಅಮೆರಿಕದಲ್ಲಿರುವ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದ್ದಲ್ಲಿ ತೀರ ಕಡಿಮೆಯಾಗಿತ್ತು. ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಇದ್ದುಕೊಂಡು ಕಲಿಯಲು ಆನ್‌ಲೈನ್ ಕೋರ್ಸ್ ಪರಿಚಯಿಸಿತ್ತು ಎಂದು ಐಎಇಸಿ ವ್ಯವಸ್ಥಾಪಕ ನಿರ್ದೇಶಕ ಮಧುಕರ್ ರೆಡ್ಡಿ ತಿಳಿಸಿದ್ದಾರೆ.

ಆಕಸ್ಮಿಕವಾಗಿ ಐಎಇಸಿ ಸಲಹಾಕಾರರು ಟ್ರೈ ವ್ಯಾಲಿ ವಿವಿ ದಕ್ಷಿಣ ಏಷ್ಯಾದ ಪ್ರತಿನಿಧಿಗಳು ಎಂದು ವಿವಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದನ್ನು ಅಲ್ಲಗಳೆದಿರುವ ಮಧುಕರ್ ರೆಡ್ಡಿ, ಟ್ರೈ ವ್ಯಾಲಿ ವಿವಿಗೆ ಒಬ್ಬ ವಿದ್ಯಾರ್ಥಿಯನ್ನು ಕೂಡ ಸಂಸ್ಥೆಯಿಂದ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಸರ್ಕಾರ ಒಂದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಇಷ್ಟೊಂದು ಜನರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋದ ತಕ್ಷಣ ವಿವಿಧ ಪ್ರಕಾರದ ಆಕರ್ಷಣೆಗೆ ಒಳಗಾಗಿ ವಿಶ್ವವಿದ್ಯಾಲಯಗಳನ್ನು ಬದಲಿಸುತ್ತಾರೆ ಎಂದು ಪ್ರತಿವರ್ಷ 300ರಿಂದ 400 ವಿದ್ಯಾರ್ಥಿಗಳನ್ನು ಯುಎಸ್‌ಎ ಹಾಗೂ ಹೊರದೇಶಗಳಿಗೆ ಕಳುಹಿಸುವ ವಾಲ್ಮೀಕಿ ಸಮೂಹದ ವ್ಯವಸ್ಥಾಪಕ ಆರ್. ರಮೇಶ ತಿಳಿಸಿದ್ದಾರೆ.

ಅಧಿಕೃತ ವೀಸಾ ಪಡೆದು ಅಮೆರಿಕಕ್ಕೆ ಹೋದ ನಂತರ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಾದರೂ ವಿಶ್ವವಿದ್ಯಾಲಯಗಳನ್ನು ಬದಲಿಸುತ್ತಾರೆ. ಕಡಿಮೆ ಶಿಕ್ಷಣ ಶುಲ್ಕ ಮತ್ತು ಕೆಲಸ ಮಾಡಲು ಅನುಮತಿ ಒದಗಿಸಿಕೊಡುವುದಾಗಿ ಹೇಳಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಟ್ರೈ ವ್ಯಾಲಿ ವಿಶ್ವವಿದ್ಯಾಲಯವನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಯಾವುದೇ ಕೋರ್ಸ್ ತೆಗೆದುಕೊಂಡರು 1,000 ಅಮೆರಿಕನ್ ಡಾಲರ್‌ಕ್ಕಿಂತ ಕಡಿಮೆ ಶುಲ್ಕ ಇದೆ ಎಂದು  ವಿವಿಯ ವೆಬ್‌ಸೈಟ್‌ನಲ್ಲಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ವಿಶ್ವವಿದ್ಯಾಲಯ 2009ರ ಫೆಬ್ರವರಿಯಲ್ಲಿ 30 ವಿದ್ಯಾರ್ಥಿಗಳಿಗೆ ವೀಸಾ ನೀಡಲು ಅನುಮತಿ ಪಡೆದುಕೊಂಡಿತ್ತು. 2009ರ ಮೇ ನಲ್ಲಿ 11 ಮತ್ತು 2010ರ ಮೇನಲ್ಲಿ 939 ವಿದ್ಯಾರ್ಥಿಗಳಿಗೆ ಎಫ್-1 ವೀಸಾದಡಿ ಅವಕಾಶ ಕಲ್ಪಿಸಲಾಗಿತ್ತು.

‘ವಿ.ವಿ.ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ. ನನ್ನ ಸಹೋದರಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕವಷ್ಟೇ ನನಗೆ ತಪ್ಪಿನ ಅರಿವಾಯಿತು. ನನ್ನ ಸಹೋದರಿಯು ಈ ಕುರಿತು ವಿಶ್ವವಿದ್ಯಾಲಯದವರನ್ನು ಪ್ರಶ್ನಿಸಿದ್ದಾಗ, ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು’ ಎಂದು ರಮೇಶ್ ತಿಳಿಸಿದ್ದಾರೆ.

 ಶಿಕ್ಷಣ ಪೂರ್ಣಗೊಳಿಸಲು ಅವಕಾಶ ನೀಡಿ: ವಯಲಾರ್
ನವದೆಹಲಿ (ಪಿಟಿಐ): ಕ್ಯಾಲಿಫೋರ್ನಿಯಾ ಮೂಲದ ಟ್ರೈ ವ್ಯಾಲಿ ವಿಶ್ವವಿದ್ಯಾಲಯದಿಂದ ವಂಚನೆಗೊಳಗಾದ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಲು ಅಮೆರಿಕ ಅವಕಾಶ ಕಲ್ಪಿಸಬೇಕೆಂದು ಸಚಿವ ವಯಲಾರ್ ರವಿ ಹೇಳಿದರು.

ತೊಂದರೆಗೊಳಗಾದ ಕೆಲ ವಿದ್ಯಾರ್ಥಿಗಳು ಈ ಕುರಿತು ತಮಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಅಲ್ಲಿನ ಸರ್ಕಾರ ಅಮೆರಿಕದ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಬೇಕೆಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವ ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT