ADVERTISEMENT

ಡಿವಿಎಸ್ ಏಕೆ ಬೇಡ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 20:20 IST
Last Updated 22 ಫೆಬ್ರುವರಿ 2012, 20:20 IST

ನವದೆಹಲಿ:ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಏಕೆ ಇಷ್ಟು ಬೇಗ ಬೇಡವಾಗಿದ್ದಾರೆ?
ಸದಾನಂದಗೌಡರ ಬದಲಾವಣೆಗಾಗಿ `ಷಡ್ಯಂತ್ರ~ ಮಾಡುತ್ತಿರುವ ಬಿಜೆಪಿ ಸಚಿವರು ಮತ್ತು ಶಾಸಕರಿಗೆ ಈ ಪ್ರಶ್ನೆ ಹಾಕಿದರೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತಿದೆ. `ಬಿಜೆಪಿ ಮುಖ್ಯಮಂತ್ರಿ ಆಗಿದ್ದರೂ ಜನತಾದಳದ ನಾಯಕರು (ದೇವೇಗೌಡರು) ಮತ್ತು ಶಾಸಕರ ತಾಳಕ್ಕೆ ಕುಣಿಯುತ್ತಿದ್ದಾರೆ. ನಮ್ಮ ಶಾಸಕರು ಮತ್ತು ಸಚಿವರನ್ನು ಕಡೆಗಣಿಸುತ್ತಿದ್ದಾರೆ~ ಎಂಬ ಉತ್ತರ ಬರುತ್ತದೆ.

ವಿಧಾನಸಭೆ ಚುನಾವಣೆಗೆ ಉಳಿದಿರುವುದು ಇನ್ನೊಂದು ವರ್ಷ. ಸದಾನಂದಗೌಡರೇ ಮುಖ್ಯಮಂತ್ರಿ ಆಗಿದ್ದರೆ 120 ಸೀಟುಗಳು ಹೋಗಲಿ 20 ಸೀಟುಗಳೂ ಬರುವುದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ತರಬೇಕಾದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂಥ ಆಕ್ರಮಣಕಾರಿ ಮನೋಭಾವದ ನಾಯಕರ ಅಗತ್ಯವಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಚಿವರೊಬ್ಬರು ತಿಳಿಸಿದ್ದಾರೆ. ಸದಾನಂದಗೌಡರಿಗೆ ಆಡಳಿತ ನಡೆಸುವ ಸಾಮರ್ಥ್ಯವಿಲ್ಲ. ಅಧಿಕಾರಿಗಳ ಮಾತು ಕೇಳುತ್ತಿದ್ದಾರೆ. ಸಚಿವ ಸಹೊದ್ಯೋಗಿಗಳಿಗೆ ಮುಕ್ತ ಅಧಿಕಾರ ಕೊಟ್ಟಿಲ್ಲ.

ಎಲ್ಲ ನಿರ್ಧಾರಗಳನ್ನು ಅವರೇ ಮಾಡುತ್ತಿದ್ದಾರೆ. ಗುಪ್ತದಳದ ಹಿರಿಯ ಅಧಿಕಾರಿಯೊಬ್ಬರಿಗೆ ಸಿಕ್ಕಾಪಟ್ಟೆ ಮಹತ್ವ ಕೊಡುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
`ಶಾಸಕರು ಕೇಳಿದ ಅಧಿಕಾರಿಗಳನ್ನು ಅವರ ಕ್ಷೇತ್ರಗಳಿಗೆ ವರ್ಗಾವಣೆ ಮಾಡುತ್ತಿಲ್ಲ. ಸಚಿವರಿಗೆ ಬೇಡವಾದ ಅಧಿಕಾರಿಗಳನ್ನು ಅವರ ಜಿಲ್ಲೆಗಳಿಗೆ ನೇಮಿಸಲಾಗುತ್ತಿದೆ. ಉಪ ಲೋಕಾಯುಕ್ತ ಹುದ್ದೆಗೆ ಚಂದ್ರಶೇಖರಯ್ಯ ಅವರನ್ನು ನೇಮಿಸುವ ತೀರ್ಮಾನವೂ ನಮ್ಮದ್ದಲ್ಲ. ಈ ನೇಮಕಾತಿ ಮಾಡುವಾಗ ಮುಖ್ಯಮಂತ್ರಿ ಯಾರೊಂದಿಗೂ ಚರ್ಚಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಬಹುತೇಕ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ವಿರುದ್ಧ ಬಿದ್ದಿದ್ದಾರೆ. ಈ ಸಲ ಪಕ್ಷದ ಹೈಕಮಾಂಡ್ ಮಾತು ಕೇಳುವ ಸ್ಥಿತಿಯಲ್ಲಿ ಅವರಿಲ್ಲ.

ನಾಯಕತ್ವ ಬದಲಾವಣೆಗೆ  ಹೈಕಮಾಂಡ್ ಒಪ್ಪದಿದ್ದರೆ ಪಕ್ಷವೂ ಒಡೆಯಬಹುದು. ಸದಾನಂದಗೌಡರ ಮೇಲೆ ಅಸಮಾಧಾನ ಹೊಂದಿರುವ ಬಹಳಷ್ಟು ಜನ ಯಡಿಯೂರಪ್ಪ ಅವರೇ ಪುನಃ ಮುಖ್ಯಮಂತ್ರಿ ಆಗಬೇಕು ಎಂಬ ನಿಲುವು ಹೊಂದಿದ್ದಾರೆ. ಕೆಲವರು ಈ ವಿಷಯವನ್ನು ಗಡ್ಕರಿ ಅವರಿಗೆ ನೇರವಾಗಿ ಹೇಳಲು ಬಯಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಆದರೆ, ರಾಜ್ಯದ ಬೆಳವಣಿಗೆ ಕುರಿತು ಬಿಜೆಪಿ ವರಿಷ್ಠರು ಮೌನವಾಗಿದ್ದಾರೆ. ಗಡ್ಕರಿ ಬೆಂಗಳೂರಿನಿಂದ ಹಿಂತಿರುಗಿ ಬಂದ ಬಳಿಕ ಎಲ್.ಕೆ. ಅಡ್ವಾಣಿ ಸೇರಿದಂತೆ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.