ADVERTISEMENT

ತಮಿಳುನಾಡಿನಲ್ಲಿ ಭಾರಿ ಮಳೆ: 14 ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಚೆನ್ನೈ: ಈಶಾನ್ಯ ಮಾರುತಗಳು ಚುರುಕಾಗಿದ್ದು, ತಮಿಳುನಾಡಿನಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಈ ಮಳೆ ನೆರೆಯ ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಿಗೂ ವ್ಯಾಪಿಸಿದೆ.

ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. 24 ಗಂಟೆಗಳಲ್ಲಿ ಕೇರಳದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಳೆ, ಸಿಡಿಲು, ಗುಡುಗು, ವಿದ್ಯುತ್ ಅಪಘಾತ ಹಾಗೂ ಗೋಡೆ ಕುಸಿತದಿಂದಾಗಿ ತಮಿಳುನಾಡಿನಲ್ಲಿ 14 ಮಂದಿ ಮೃತಪಟ್ಟಿದ್ದಾರೆ.

ವಿಲ್ಲುಪುರಂ ಜಿಲ್ಲೆಯ ಮಣಕಾರಂನಲ್ಲಿ 12 ಸೆಂ.ಮೀ ಗರಿಷ್ಠ ಮಳೆ ಪ್ರಮಾಣ ದಾಖಲಾಗಿದೆ. ಕಲ್ಪಾಕಂನಲ್ಲಿ 11 ಸೆಂ.ಮೀ, ನಾಗಪಟ್ಟಣಂ ಜಿಲ್ಲೆಯ ಸಿರ್ಕಾಲಿಯಲ್ಲಿ 7 ಸೆಂ.ಮೀ ಮಳೆ ಸುರಿದಿದೆ.  ಚೆನ್ನೈನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಕಾವೇರಿ ನದಿ ಮುಖಜಭೂಮಿಯಲ್ಲಿ ಮಳೆಯಾಗುತ್ತಿದ್ದು, ಸಾಂಬಾ (ದೀರ್ಘಕಾಲದ ಬೆಳೆ),  ಬತ್ತದ ಬೆಳೆ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಮಿಳುನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಮೆಟ್ಟೂರು ಜಲಾಶಯದಿಂದ ಹೊರ ಬಿಡುತ್ತಿದ್ದ ನೀರಿನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಎಂದು ಕಾವೇರಿ ನದಿ ಮುಖಜ ಭೂಮಿ ರೈತ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ರಂಗನಾಥನ್ ಹೇಳಿದ್ದಾರೆ.

 `ರಾಜ್ಯಕ್ಕೆ ಅನ್ನ ನೀಡುವ ಪ್ರದೇಶವೆಲ್ಲ ಈಶನ್ಯ ಮಾರುತಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ವಾಯವ್ಯ ಮಾರುತಗಳ ಕೊರತೆಯಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ಈಗಾಗಲೇ ಬತ್ತವನ್ನು ಬಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ಮೂಡಿತ್ತು. ಆದರೆ ಈ ಮಳೆ ರೈತರಲ್ಲಿ ಭರವಸೆ ಮೂಡಿಸಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು, ಪುದುಚೆರಿ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಭಾಗದ ಕೆಲವು ಪ್ರದೇಶಗಳಲ್ಲಿ, ರಾಯಲುಸೀಮಾ,  ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.